ಸಾರಾಂಶ
- ಚನ್ನಗಿರಿ ಹಿರೇಮಠ ಆವರಣದಲ್ಲಿ 142ನೇ ಶಿವಾನುಭವಗೋಷ್ಠಿ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚಿನ ಗಮನಹರಿಸದೇ ರಾಜ್ಯದ ಜನತೆಗೆ ಮಂಕುಬೂದಿ ಎರಚುವಲ್ಲಿ ಮುನ್ನಡೆದಿರುವುದು ತರವಲ್ಲ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ಭಾನುವಾರ ಸಂಜೆ ಪಟ್ಟಣದ ಕಲ್ಲುಸಾಗರ ಬೀದಿಯ ಬಸವಣ್ಣ ದೇವಾಲಯದ ಹಿಂಭಾಗದ ಹಿರೇಮಠದ ಆವರಣದಲ್ಲಿ ಗುರು ಪೂರ್ಣಿಮೆ ನಿಮಿತ್ತ 142ನೇ ಶಿವಾನುಭವ ಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ತಾತ್ಕಾಲಿಕ ಪಂಚ ಗ್ಯಾರಂಟಿಗಳನ್ನು ನೀಡುವುದಕ್ಕಿಂತ ರಾಜ್ಯದ ಎಲ್ಲ ಜನತೆಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ನೀಡಿ, ರಾಜ್ಯದ ಜನರನ್ನು ಸದೃಢಗೊಳಿಸಬೇಕಾಗಿದೆ. ಚುನಾವಣೆಗಳಲ್ಲಿ ಗೆಲ್ಲಲೇಬೇಕು ಎಂಬ ಸ್ವಾರ್ಥಪರ ರಾಜಕಾರಣಕ್ಕಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ ಇಂತಹ ಆಸೆಗಳನ್ನು ತೋರಿಸುವ ಅಶಾಶ್ವತ ಯೋಜನೆಗಳು ರಾಜ್ಯದ ಪ್ರಗತಿಗೆ ಮಾರಕ ಎಂದು ತಿಳಿಸಿದರು.ಶಕ್ತಿ ಯೋಜನೆಯ ಉಚಿತ ಬಸ್ ಸಂಚಾರದಲ್ಲಿ ಶ್ರೀಮಂತ ವರ್ಗದ ಜನರಿಂದ ಹಿಡಿದು ಬಡಜನರು ಸಂಚರಿಸುತ್ತಿದ್ದಾರೆ. ಇದರ ಬದಲಿಗೆ ಹಿರಿಯ ನಾಗರೀಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಬೇಕು. ಅವರಾದರೂ ವಿನಾಕಾರಣ ಎಲ್ಲಿಯೂ ಸಂಚರಿಸಲಾರರು. ಅಪರೂಪಕ್ಕೊಮ್ಮೆ ತೀರ್ಥ ಕ್ಷೇತ್ರಗಳಿಗೋ, ಸಂಬಂಧಿಕರ ಊರುಗಳಿಗೂ ಹೋಗಿ ಬರುತ್ತಾರೆ. ಅವರಿಗೆ ನೀಡುವ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿಯನ್ನು ಹೆಚ್ಚಿಸಿದರೆ, ಆ ಹಿರಿಯ ಜೀವಿಗಳು ಅಧಿಕಾರ ನಡೆಸುವಂತಹ ನಿಮ್ಮನ್ನು ಹರಸುವರು ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.
ಶಿವ ಕೇಶವ ಭಜನಾ ಮಂಡಳಿ ಅಧ್ಯಕ್ಷ ಜಯಶಂಕರ ಶಾಸ್ತ್ರಿ ಮಾತನಾಡಿ, ಮಠ- ಮಂದಿರಗಳಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಆಗಮಿಸಿ, ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಶ್ರೀ ಬಾಲಾಜಿ ಭಜನಾ ಮಂಡಳಿಯ ಅಧ್ಯಕ್ಷ ಸುವರ್ಣಮ್ಮ, ಕರಿಸಿದ್ದಪ್ಪ ಮಾಸ್ತರ್, ಗುತ್ತಿಗೆದಾರ ಪೀರ್ ಖಾನ್ ಸಾಬ್ ಉಪಸ್ಥಿತರಿದ್ದರು. ಬಾಲಾಜಿ ಭಜನಾ ಮಂಡಳಿ, ಶಿವ ಕೇಶವ, ಅಕ್ಕ ಮಹಾದೇವಿ ಭಜನಾ ಮಂಡಳಿಯ ಸದಸ್ಯರು ಸುಶ್ರಾವ್ಯವಾಗಿ ಭಜನೆ ಗೀತೆಗಳನ್ನು ಹಾಡಿದರು.
- - - -22ಕೆಸಿಎನ್‌ಜಿ2:ಚನ್ನಗಿರಿ ಪಟ್ಟಣದ ಹಿರೇಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ 142ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು ಮಾತನಾಡಿದರು.