ಚಿಕ್ಕಮಗಳೂರು ನಗರದ ಸಮೂಹ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವುದಕ್ಕೆ ಕೆಎಸ್‌ಆರ್‌ಟಿಸಿಯು ಮುಂದಾಗಿದ್ದು, ಶೀಘ್ರದಲ್ಲಿ ನಗರ ಸಾರಿಗೆ ಜಾಲಕ್ಕೆ 5 ಹೊಸ ಮಿನಿ ಬಸ್‌ ಸೇರ್ಪಡೆಗೊಳ್ಳಲಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರದ ಸಮೂಹ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವುದಕ್ಕೆ ಕೆಎಸ್‌ಆರ್‌ಟಿಸಿಯು ಮುಂದಾಗಿದ್ದು, ಶೀಘ್ರದಲ್ಲಿ ನಗರ ಸಾರಿಗೆ ಜಾಲಕ್ಕೆ 5 ಹೊಸ ಮಿನಿ ಬಸ್‌ ಸೇರ್ಪಡೆಗೊಳ್ಳಲಿದೆ.

ಚಿಕ್ಕಮಗಳೂರು ನಗರವು 30 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು 1.40 ಲಕ್ಷ ಜನ ವಾಸಿಸುತ್ತಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ನಗರಕ್ಕೆ ಪ್ರತಿ ದಿನ ಕಚೇರಿ, ಬ್ಯಾಂಕ್‌ ಕೆಲಸ, ಉದ್ಯೋಗ, ವ್ಯಾಪಾರ, ಶಿಕ್ಷಣ, ಆರೋಗ್ಯ ಸೇರಿದಂತೆ ಮೊದಲಾದ ಕಾರ್ಯಗಳಿಗೆ ಸಾವಿರಾರು ಮಂದಿ ಬಂದು ಹೋಗುತ್ತಾರೆ.

ಹೀಗಾಗಿ, ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸದ್ಯ ಇರುವ ನಗರ ಸಾರಿಗೆ ಬಸ್‌ ವ್ಯವಸ್ಥೆ ಸಾಕಾಗುತ್ತಿಲ್ಲ ಎಂಬ ಕಾರಣಕ್ಕೆ ಇದೀಗ ನಗರ ಸಾರಿಗೆ ಬಸ್‌ ಸಂಖ್ಯೆ ಹೆಚ್ಚಿಸುವುದಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದೆ.

ಸದ್ಯ ನಗರದ ಪ್ರಮುಖ ಪ್ರದೇಶ, ಬಡಾವಣೆ ಸೇರಿದಂತೆ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೂ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಮುಖವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ತೇಗೂರು, ಜಿಲ್ಲಾ ಪಂಚಾಯಿತಿ, ಲಕ್ಯಾ, ಬೈಪಾಸ್‌ನ ಕಲ್ಯಾಣ ನಗರ ಪವಿತ್ರವನ, ಹೀಗೆ, ಬಸ್‌ ಸಂಚಾರ ಮಾಡುತ್ತಿವೆ. ಆದರೂ ಸಾಕಾಗುತ್ತಿಲ್ಲ. ಹೀಗಾಗಿ, ಹೆಚ್ಚುವರಿ ಬಸ್‌ ಓಡಿಸುವುದಕ್ಕೆ ತೀರ್ಮಾನಿಸಲಾಗಿದೆ.

ಮಿನಿ ಬಸ್‌ಗೆ ಪ್ರಸ್ತಾವನೆ:

ನಗರದಲ್ಲಿ ಸದ್ಯ 5 ಬಸ್‌ ದಿನಕ್ಕೆ ಒಟ್ಟು 78 ಟ್ರಿಪ್‌ ಸಂಚಾರ ಮಾಡುತ್ತಿವೆ. ಹೊಸದಾಗಿ ಇನ್ನೂ 5 ಮಿನಿ ಬಸ್‌ಗೆ ಚಿಕ್ಕಮಗಳೂರು ವಿಭಾಗೀಯ ಅಧಿಕಾರಿ ಕಚೇರಿಯಿಂದ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಎರಡ್ಮೂರು ತಿಂಗಳಿನಲ್ಲಿ ಹೊಸ ಮಿನಿ ಬಸ್‌ ಬರಲಿವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯ ಅಧಿಕಾರಿಗಳು ‘ಕನ್ನಡಪ್ರಭ’ಗೆ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ನಗರದ ರಸ್ತೆಗಳ ಕಿರಿದಾಗಿವೆ. ಸಣ್ಣ ನಗರ ಆಗಿರುವುದರಿಂದ ಅಡೆತಡೆ ಇಲ್ಲದೇ ಬಸ್‌ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಿನಿ ಬಸ್‌ಗಳನ್ನೇ ಪೂರೈಕೆ ಮಾಡುವಂತೆ ಮನವಿ ಮಾಡಲಾಗಿದೆ.

ತಿಂಗಳಿಗೆ 87 ಸಾವಿರ ಮಂದಿ ಓಡಾಟ:

ಚಿಕ್ಕಮಗಳೂರು ನಗರದಲ್ಲಿ ಸದ್ಯ ಐದು ಬಸ್‌ಗಳಲ್ಲಿ ತಿಂಗಳಿಗೆ ಸರಾಸರಿ 87 ಸಾವಿರ ಮಂದಿ ಓಡಾಟ ನಡೆಸುತ್ತಿದ್ದಾರೆ. ಇದಲ್ಲದೇ, ಕಡೂರು, ತರೀಕೆರೆ, ಮೂಡಿಗೆರೆ, ಬೀರೂರು ಸೇರಿದಂತೆ ಮೊದಲಾದ ಕಡೆ ಸಂಚಾರ ಮಾಡುವ ಬಸ್‌ಗಳಲ್ಲಿಯೂ ನಗರದ ಎಐಟಿ, ಜಿಪಂ, ಬೈಪಾಸ್‌, ಲಕ್ಯಾ, ಹೌಸಿಂಗ್‌ ಬೋರ್ಡ್‌ ಸೇರಿದಂತೆ ಮೊದಲಾದ ಕಡೆ ನಗರ ವ್ಯಾಪ್ತಿಯ ಪ್ರಯಾಣಿಕ ಓಡಾಟಕ್ಕೆ ಅವಕಾಶ ನೀಡಲಾಗಿದೆ.

ಇನ್ನೂ ಜೂನ್‌ಗೆ ಶಾಲಾ ಕಾಲೇಜು ಪುನರ್ ಆರಂಭಗೊಂಡ ಬಳಿಕ ಈ ಸಂಖ್ಯೆಯು 1 ಲಕ್ಷ ವರೆಗೆ ಮುಟ್ಟುವ ಸಾಧ್ಯತೆ ಇದೆ. ಈ ಪ್ರಕಾರ ಐದು ಬಸ್‌ಗಳಲ್ಲಿ ದಿನಕ್ಕೆ ಸುಮಾರು 3 ಸಾವಿರ ಮಂದಿ ಪ್ರಮಾಣ ಮಾಡುತ್ತಿದ್ದಾರೆ. ಹೊಸ ಬಸ್‌ ಸೇರ್ಪಡೆಗೊಂಡ ಬಳಿಕ ಜನರ ಓಡಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೊಸ ಬಸ್‌ ನೊಂದಿಗೆ ಶೆಲ್ಟರ್‌ ನಿರ್ಮಾಣ:

ನಗರದ ವಿವಿಧ ಭಾಗದಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣ ಮಾಡಿ, ನಗರ ಸಂಚಾರಿ ಬಸ್‌ನಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕೂ ಚಿಂತನೆ ನಡೆಸಲಾಗಿದೆ. ಶೆಲ್ಟರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚೆ ಮಾಡಿ, ಎಲ್ಲೆಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣ ಮಾಡಬೇಕೆಂದು ಅಂತಿಮಗೊಳಿಸುವುದಕ್ಕೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

ನಗರ ಸಾರಿಗೆ ಬಸ್‌ ಕೊರತೆಯಿಂದ ಪ್ರತಿ ದಿನ ರಸ್ತೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೈಕ್‌ಗಳಿಗೆ ಕೈ ಮಾಡಿ, ಡ್ರಾಪ್‌ ತೆಗೆದುಕೊಳ್ಳುವ ಪರಿಸ್ಥಿತಿ ನಗರದಲ್ಲಿ ಇದೆ. ನಗರ ಸಾರಿಗೆ ವ್ಯವಸ್ಥೆ ಬಲ ಪಡೆಸಿದರೆ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಯುಕ್ತಿ ನರ್ಸಿಂಗ್‌ ವಿದ್ಯಾರ್ಥಿನಿ.

ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಬಸ್‌ ಸಂಚಾರ ವ್ಯವಸ್ಥೆಯನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ನಗರ ಸಾರಿಗೆ ವ್ಯವಸ್ಥೆ ಸುಧಾರಿಸಲು ಹೆಚ್ಚುವರಿ ಐದು ಬಸ್‌ ಓಡಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಐದು ಹೊಸ ಮಿನಿ ಬಸ್‌ ಸೇರ್ಪಡೆ ಆಗಲಿವೆ.

ಸತೀಶ್‌ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿ, ಚಿಕ್ಕಮಗಳೂರು

ಇತರೆ ಮಾರ್ಗಕ್ಕೂ 80 ಬಸ್‌ಗೆ ಪ್ರಸ್ತಾವನೆ

ಸದ್ಯ ಚಿಕ್ಕಮಗಳೂರು ವಿಭಾಗೀಯ ಕೇಂದ್ರದ ಸುಮಾರು 45 ಬಸ್‌ಗಳಿಗೆ 15 ವರ್ಷ ಪೂರೈಕೆ ಆಗುತ್ತಿದ್ದು, ಈ ಬಸ್‌ಗೆ ಪರ್ಯಾಯವಾಗಿ ಮತ್ತು ಹೆಚ್ಚುವರಿ ಮಾರ್ಗದಲ್ಲಿಯೂ ಬಸ್‌ ಓಡಿಸುವುದಕ್ಕೆ ಒಟ್ಟು 80 ಬಸ್‌ಗೆ ಪ್ರಸ್ತವಾನೆ ಸಲ್ಲಿಕೆ ಮಾಡಲಾಗಿದೆ. ಹಂತವಾಗಿ ಬಸ್‌ ಪೂರೈಕೆ ಆಗಲಿದೆ.