ಕೊಪ್ಪಳ: ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಅಲ್ಲಿಯ ಮತದಾರರು ಎನ್‌ಡಿಎ ಬೆಂಬಲಿಸುವ ಮೂಲಕ ನವ ಭಾರತಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಫಲಿತಾಂಶದ ಮೂಲಕ ಮತದಾರರು ಅಭಿವೃದ್ಧಿ, ಸ್ಥಿರತೆ ಮತ್ತು ಭದ್ರತೆಗೆ ಮನ್ನಣೆ ನೀಡಿದ್ದಾರೆ. ಇಂದು ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಜನರ ವಿಶ್ವಾಸ ಮತ್ತೊಮ್ಮೆ ವ್ಯಕ್ತವಾಗಿದೆ. ಇಂದಿನ ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳು ದೇಶಾದ್ಯಂತ “ಮೋದಿ ಹವಾ” ಇನ್ನೂ ಮುಂದುವರಿದಿದೆ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿವೆ. ಪಶ್ಚಿಮ ಬಂಗಾಳದ ಫಲಿತಾಂಶವು ದೇಶದ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆಗೆ ದೊಡ್ಡ ಜಯ ತಂದುಕೊಟ್ಟಿದೆ. ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ರಾಜ್ಯದ ಜನತೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು. ಇದೀಗ ಬಂದಿರುವ ಫಲಿತಾಂಶವು ಆ ರಾಜ್ಯದಲ್ಲಿ ಬದಲಾವಣೆಯ ಆಶೆಯನ್ನು ಮೂಡಿಸಿದ್ದು, ದೇಶದ ಜನರು ಈ ಬೆಳವಣಿಗೆಯನ್ನು ಸ್ವಾಗತಿಸುತ್ತಿದ್ದಾರೆ.ಇನ್ನೊಂದೆಡೆ, ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯ ಸಾಧಿಸದಿರುವುದು ನಮಗೆ ಸ್ವಲ್ಪ ನಿರಾಶೆ ತಂದಿದೆ. ಆದಾಗ್ಯೂ, ಇದನ್ನು ಪಾಠವಾಗಿ ತೆಗೆದುಕೊಂಡು ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಬಲಪಡಿಸುವ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತದೆ ಎಂದರು.
ಬಿಜೆಪಿ ಮೂರು ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು-ನವೀನ್ ಗುಳಗಣ್ಣವರ:ಬಿಜೆಪಿ ಮೂರು ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ ಗುಳಗಣ್ಣವರ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಮಹತ್ವದ ವಿಜಯವು ದೇಶದ ಜನತೆ ಅಭಿವೃದ್ಧಿ, ಸುಶಾಸನ ಮತ್ತು ಪಾರದರ್ಶಕ ಆಡಳಿತದ ಮೇಲಿರುವ ಭರವಸೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವ ಮತ್ತು ಜನಪರ ಯೋಜನೆಗಳು ಜನಮನ ಗೆದ್ದಿವೆ. ಪಕ್ಷದ ಕಾರ್ಯಕರ್ತರ ಶ್ರಮ, ಸಂಘಟನೆಯ ಬಲ ಮತ್ತು ಜನರ ಆಶೀರ್ವಾದವೇ ಈ ವಿಜಯದ ಮೂಲಶಕ್ತಿ. ಈ ಫಲಿತಾಂಶಗಳು ದೇಶದ ಅಭಿವೃದ್ಧಿಯ ದಿಕ್ಕಿನಲ್ಲಿ ಮತ್ತೊಂದು ಮೈಲಿಗಲ್ಲಾಗಿದ್ದು, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಎಂಬ ದೃಷ್ಟಿಕೋನವನ್ನು ಜನರು ಮತ್ತೊಮ್ಮೆ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸಕ್ಕೆ ತಕ್ಕಂತೆ ಇನ್ನಷ್ಟು ಸಮರ್ಪಕ ಸೇವೆ ನೀಡಲು ಮತ್ತು ರಾಷ್ಟ್ರೀಯತೆ ಎತ್ತಿ ಹಿಡಿಯಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದಾರೆ.