ಕಬ್ಬು ಬೆಳೆಗಾರರಿಗೆ ಮುಂಗಡ ₹4000 ನಿಗದಿ ಮಾಡಿ

| Published : Jul 31 2024, 01:03 AM IST

ಕಬ್ಬು ಬೆಳೆಗಾರರಿಗೆ ಮುಂಗಡ ₹4000 ನಿಗದಿ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘವು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿಗೆ ಮುಂಗಡವಾಗಿ ೪೦೦೦ ರು. ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಚಾಮರಾಜೇಶ್ವರಿ ದೇವಸ್ಥಾನದ ಹತ್ತಿರ ಸಮಾವೇಶಗೊಂಡ ಪ್ರತಿಭಟನಾಕಾರರು ನಂತರ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿಗೆ ಮುಂಗಡವಾಗಿ ೪೦೦೦ ರು. ನಿಗದಿ ಮಾಡಿ, ಕಳೆದ ಸಾಲಿನ ಲಾಭಾಂಶ ಸರ್ಕಾರದ ಆದೇಶ ಪ್ರತಿ ಟನ್ ಗೆ ೧೫ ರು. ಹಾಗೂ ಸಕ್ಕರೆ ಕಾರ್ಖಾನೆಯ ಮುಂದೆ ಎಪಿಎಂಸಿ ಮುಖಾಂತರ ಮುಖ್ಯ ದ್ವಾರದಲ್ಲಿ ತೂಕದ ಯಂತ್ರ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಅಂತರ ಜಿಲ್ಲಾ ಕಬ್ಬು ಸಾಗಣೆ ನಿರ್ಬಂಧವನ್ನು ಹೇರಬಾರದು. ಮುಕ್ತ ಮಾರುಕಟ್ಟೆಯಲ್ಲಿ ರೈತ ಮಾರಾಟ ಮಾಡಿದರೆ ಹೆಚ್ಚಿನ ಬೆಲೆ ಸಿಗುತ್ತದೆ. ಕಟಾವು ವಿಳಂಬ ತಪ್ಪುತ್ತದೆ, ಪೈಪೋಟಿಯ ದರ ರೈತರಿಗೆ ಸಿಗುತ್ತದೆ ಎಂದ ಅವರು, ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಇಳುವರಿ ಪ್ರತಿ ಟನ್ ಕಬ್ಬಿಗೆ ೧೦.೫ಕ್ಕೆ ಏರಿಕೆ ಮಾಡಿ ೩೪೦೦ ನಿಗದಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹ. ತಕ್ಷಣ ಇದನ್ನು ಮರುಪರಿಶೀಲನೆ ಮಾಡಿ ೮.೫ಕ್ಕೆ ಇಳುವರಿ ನಿಗದಿ ಮಾಡಬೇಕೆಂದು ಆಗ್ರಹಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆಯ ಲಾಭಾಂಶ ಮತ್ತು ಖರ್ಚಿನ ಬ್ಯಾಲೆನ್ಸ್ ಶೀಟನ್ನು ತನಿಖೆ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು. ಕಬ್ಬು ಕಟಾವು ಸಾಗಾಣಿಕೆ ಕೂಲಿಯನ್ನು ಮನ ಬಂದಂತೆ ನಿಗದಿ ಮಾಡಿ ರೈತರನ್ನು ಕಾರ್ಖಾನೆ ಸುಲಿಗೆ ಮಾಡುತ್ತಿದೆ ಎಂದು ದೂರಿದರು.

ಕಬಿನಿ ಮತ್ತು ಕಾವೇರಿಯ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶ ನಾಲೆಗಳಿಗೆ ಹಾಗೂ ಕೆರೆ ಕಟ್ಟೆಗಳಿಗೆ ಕಳೆದ ವರ್ಷ ತಮಿಳುನಾಡಿಗೆ ನೀರು ಬಿಟ್ಟು ರೈತರಿಗೆ ನೀರು ಕೊಡದೆ ಷರತ್ತು ವಿಧಿಸಿ ವ್ಯಾಪ್ತಿಯ ರೈತರು ಬರ ಪೀಡಿತರಾಗಿದ್ದಾರೆ. ಆದ್ದರಿಂದ ಪ್ರಸಕ್ತ ಸಾಲಿಗೆ ಯಾವುದೇ ನಿರ್ಬಂಧ ಷರತ್ತು ಹಾಕದೆ ವ್ಯವಸಾಯಕ್ಕೆ ನೀರನ್ನು ಬಿಡಬೇಕು ಎಂದು ಒತ್ತಾಯಿಸಿದರು,

ನಾಲೆಗಳಿಗೆ ಸುತ್ತಮುತ್ತ ಪಂಪ್ಸೆಟ್ ಕೊರೆಯಬಾರದು ಮತ್ತು ನಾಲೆಯಿಂದ ಮೋಟಾರ್‌ಗಳ ಮೂಲಕ ನೀರು ತೆಗೆದುಕೊಳ್ಳಬಾರದು ಎಂಬ ನಿಯಮ ಮಾಡಿರುವುದು ರೈತರಿಗೆ ಮಾರಕವಾಗಿದ್ದು, ಇದರ ವಿರುದ್ಧ ಕಾನೂನು ಭಂಗ ಚಳವಳಿ ನಡೆಸಬೇಕಾಗುತ್ತದೆ. ಈ ನಿಯಮವನ್ನು ನೀರಾವರಿ ಸಚಿವರು ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಮಲಿಯೂರಿನ ರಾಂಪುರ ಕೆರೆಗೆ ಆಲಂಬೂರು ಏತ ನೀರಾವರಿಯಿಂದ ನೀರು ತುಂಬಿಸುವ ಯೋಜನೆ ವಿಸ್ತರಿಸಬೇಕು. ಇದರಿಂದ ಹಿರಿ ಬೇಗೂರು ಕಿಳಲಿಪುರ ಅರಳಿ ಕಟ್ಟೆ ಕುಲಗಾಣ ಗ್ರಾಮಗಳಿಗೆ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ ಆದ್ದರಿಂದ ಈ ಯೋಜನೆ ತಕ್ಷಣ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದರು.

ಹೊಸ ಕೃಷಿ ಪಂಪ್ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ರೈತರು ಹೊಸ ಕೃಷಿ ಪಂಪ್ಸೆಟ್ಟುಗಳಿಗೆ ಸಂಪರ್ಕ ಪಡೆಯಬೇಕಾದರೆ ಎರಡು ಮೂರು ಲಕ್ಷ ರು. ಖರ್ಚಾಗುತ್ತದೆ. ತಕ್ಷಣ ಈ ನಿಯಮ ಕೈ ಬಿಟ್ಟು ರೈತರ ಕೃಷಿಗೆ ವಿದ್ಯುತ್ ನೀಡಬೇಕು. ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ಸಾಕಷ್ಟು ಕೃಷಿಗೆ ಹೊಸ ಸಾಲ ನೀಡುತಿಲ್ಲ. ಮಲೆಯೂರಿನ ಪ್ರಾಥಮಿಕ ಸಹಕಾರ ಸಂಘದಲ್ಲಿ ರೈತರ ಚಿನ್ನ ವಾಪಸ್ ಕೊಡುವಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ತಕ್ಷಣ ಸರಿಪಡಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರ ಜೊತೆಯಲ್ಲಿ ಸಭೆ ನಡೆಸಬೇಕು. ಸ್ಥಳೀಯ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಲು ವಿಫಲರಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ಅಂಬಳೆ ಮಹದೇವಸ್ವಾಮಿ, ವಳಗೆರೆ ಗಣೇಶ್, ಮಲೆಯೂರು ಮಹೇಂದ್ರ, ಸತೀಶ್, ಪ್ರವೀಣ್, ಉಡಿಗಾಲ ಗ್ರಾಮ ಘಟಕ ಅಧ್ಯಕ್ಷರಾದ ಮಂಜುನಾಥ್, ಮಹದೇಸ್ವಾಮಿ, ಗುರುಮಲ್ಲಪ್ಪ, ಛೇರ್ಮನ್ ಗುರು, ಶಿವಕುಮಾರ್, ಕೂಸ, ಹರಳೀಕಟ್ಟೆ ಸಿದ್ದಪ್ಪ, ಮಹದೇವಸ್ವಾಮಿ, ಕಿಳಲೀಪುರ ಗೂಳಿ ಮಹಾದೇವ, ಶ್ರೀಕಂಠ, ಗುರುವಿನಪುರ ಮೋಹನ್, ಮಂಜು, ಬಸವಣ, ಚಂದ್ರಪ್ಪ, ಮಹೇಶ್ ಮತ್ತಿತರರಿದ್ದರು.