ಸಾರಾಂಶ
ಶಿಕಾರಿಪುರ : ತಾಲೂಕಿನಾದ್ಯಂತ ಅತಿಯಾದ ಮಳೆಯಿಂದಾಗಿ ಉಂಟಾದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಜೆಯನ್ನು ಪಡೆಯದೇ ಕರ್ತವ್ಯ ನಿರ್ವಹಿಸಬೇಕು ಎಂದು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನಾದ್ಯಂತ ಅತಿವೃಷ್ಟಿಯಿಂದಾಗಿ ಹಾನಿಗೆ ಒಳಗಾದ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶನಿವಾರ ರಾತ್ರಿ ಪಾಲ್ಗೊಂಡು ಅವರು ವಸ್ತುಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದು ಮಾತನಾಡಿದರು.
ತಾಲೂಕಿನಾದ್ಯಂತ ಕಳೆದ ವಾರದ ಅವಧಿಯಲ್ಲಿ ವಿಪರೀತ ಮಳೆಯಿಂದಾಗಿ ಹಲವು ಮನೆಗಳು ಸಂಪೂರ್ಣ ಹಾನಿಯಾಗಿದ್ದು ಜಾನುವಾರುಗಳು ಮೃತಪಟ್ಟಿವೆ ಕೆರೆಕಟ್ಟೆಗಳು ಭರ್ತಿಯಾಗಿ ಹಲವೆಡೆ ಜಮೀನಿಗೆ ನೀರು ನುಗ್ಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳ ಸಹಿತ ಎಲ್ಲಾ ಅಧಿಕಾರಿಗಳು ನಾಗರಿಕರ ದೂರವಾಣಿ ಕರೆ ಬಗ್ಗೆ ನಿರ್ಲಕ್ಷಿಸದೆ ಸ್ವೀಕರಿಸಿ ಸಮಸ್ಯೆ ಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ತಿಳಿಸಿದರು.
ಕರ್ತವ್ಯದಲ್ಲಿನ ನಿರ್ಲಕ್ಷ್ಯದ ಬಗ್ಗೆ ಆರೋಪ ಕೇಳಿ ಬಂದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರಿ ಮಾಹಿತಿ ನೀಡಿ,ತಾಲೂಕಿನಲ್ಲಿ ಇದುವರೆಗೂ 122 ಮನೆ ಹಾಗೂ 12 ಕೊಟ್ಟಿಗೆಗಳು ಮಳೆಯ ತೀವ್ರತೆಗೆ ಹಾನಿಗೆ ಒಳಗಾಗಿದ್ದು,ಆರು ಜಾನುವಾರಗಳು ಸಾವನ್ನಪ್ಪಿದೆ ಒರ್ವ ವ್ಯಕ್ತಿಯ ಜೀವ ಹಾನಿಯಾಗಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಮಾತನಾಡಿ,ಜುಲೈ ಮಾಹೆಯಲ್ಲಿ ವಾಡಿಕೆ ಮಳೆ 257 ಮಿ. ಮೀ ಬದಲಿಗೆ ಕೇವಲ 18 ದಿನಗಳಲ್ಲಿ 319.3 ಮಿ.ಮೀ ಮಳೆಯಾಗಿದ್ದು ಅತಿವೃಷ್ಟಿಯಿಂದಾಗಿ 25 ದಿನಗಳ ಮೆಕ್ಕೆಜೋಳವು ತೀವ್ರ ಹಾನಿಗೆ ಒಳಗಾಗಿದೆ.ಖುಷ್ಕಿ ಜಮೀನಿನಲ್ಲಿ ಬೆಳೆದ 75 ಹೆಕ್ಟರ್ ಹಾಗೂ ತರಿಭೂಮಿಯಲ್ಲಿನ 550 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಹಾನಿಗೆ ಒಳಗಾಗುವ ಆತಂಕದಲ್ಲಿದೆ ಎಂದು ತಿಳಿಸಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರು ಬೆಳೆಗೆ ವಿಮಾ ಮಾಡಿಸಲು ಅವಕಾಶವಿದ್ದು ಈ ತಿಂಗಳ ಅಂತ್ಯದ ಒಳಗಾಗಿರುವ ಬೆಳೆ ವಿಮೆ ಅವಕಾಶವನ್ನು ಸದ್ಬಳಕೆಗೆ ಸೂಚಿಸಿದರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಯೂರಿಯಾ ರಸಗೊಬ್ಬರವನ್ನು ತಾಲೂಕಿನ ರೈತರು ಬಳಸುತ್ತಿದ್ದು ಈ ದಿಸೆಯಲ್ಲಿ ಯೂರಿಯಾ ಗೊಬ್ಬರ ಸಹಿತ ಎಲ್ಲ ವಿವಿಧ ರೀತಿಯ ರಸಗೊಬ್ಬರದ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದೆ ಎಂದು ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ನವೀನ್ ಖಾನ್ ಮಾತನಾಡಿ,ತಾಲೂಕಿನಲ್ಲಿ 1865 ಡೆಂಗ್ಯೂ ಟೆಸ್ಟ್ ಗಳನ್ನು ಮಾಡಲಾಗಿದ್ದು ಇವುಗಳಲ್ಲಿ 83 ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ.ಡೆಂಗ್ಯೂವಿನಿಂದಾಗಿ ಒರ್ವ ವ್ಯಕ್ತಿ ಸಾವನ್ನಪ್ಪಿದ್ದು ಸದ್ಯ ಡೆಂಗ್ಯೂ ಪ್ರಕರಣ ಹತೋಟಿಯಲ್ಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್,ಪುರಸಭಾ ಮುಖ್ಯಾಧಿಕಾರಿ ಭರತ್,ಆರಕ್ಷಕ ವೃತ್ತ ನಿರೀಕ್ಷಕ ರುದ್ರೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ರಫೀಕ್ ಖಾನ್,ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿಕುಮಾರ್,ನೀರಾವರಿ ಇಲಾಖೆ ಎಇಇ ಮಂಜುನಾಥ್,ರಾಮಪ್ಪ ಸಹಿತ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.