ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕೃಷ್ಣಾ ನದಿಯ ನೀರಿನ ಒಳಹರಿವು 1,98,000 ಕ್ಯುಸೆಕ್ ದಾಟಿರುವುದರಿಂದ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಮತ್ತಷ್ಟು ಹೆಚ್ಚಿದೆ. ಒಳಹರಿವಿನ ಪ್ರಮಾಣ ಶುಕ್ರವಾರ 2 ಲಕ್ಷ ಕ್ಯುಸೆಕ್‌ಗೂ ಅಧಿಕವಾದ ನೀರು ಹರಿದುಬರುವ ಸಾಧ್ಯತೆ ಇರುವುದರಿಂದ ಕೃಷ್ಣಾ ನದಿದಂಡೆಯ ವಸತಿ ಪ್ರದೇಶಗಳು ನಡುಗಡ್ಡೆಗಳಾಗುತ್ತಿವೆ. ಗುರುವಾರದ ಹೊತ್ತಿಗೆ ಎರಡು ತೋಟದ ವಸತಿ ಪ್ರದೇಶಗಳ 75ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯ ಪೂರ್ಣಗೊಂಡಿದೆ.ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶದ 40ಕ್ಕೂ ಅಧಿಕ ಕುಟುಂಬಗಳ 120 ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಶಾಶ್ವತ ನೆಲೆ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದ ಈ ಜನರನ್ನು ತಾಲೂಕು ಅಧಿಕಾರಿಗಳು ಮನವೊಲಿಸಿ ಹುಲಗಬಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಸಪ್ತಸಾಗರ ಗ್ರಾಮದ ಬನದ ತೋಟದ 35ಕ್ಕೂ ಅಧಿಕ ಕುಟುಂಬಗಳ ಜನರನ್ನು ಹಾಗೂ ಜಾನುವಾರುಗಳನ್ನು ಬೋಟ್ ಮೂಲಕ ಗ್ರಾಮದ ಸರ್ಕಾರಿ ಪ್ರಾಥಮಿಕ ಕೇಂದ್ರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಅಥಣಿ ತಾಲೂಕಿನ 22 ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ದರೂರ ಬ್ರಿಡ್ಜ್‌ಗೆ ಕೆಳಹಂತಕ್ಕೆ ಕೃಷ್ಣಾ ನದಿಯ ನೀರು ಬರುತ್ತಿದ್ದು, ನೀರು ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಬ್ರಿಡ್ಜ್ ಮೇಲೆ ನೀರು ಹರಿಯುವ ಆತಂಕ ಎದುರಾಗಿದೆ. ಅಲ್ಲದೆ, ತಾಲೂಕಿನ ಜನವಾಡ, ತೀರ್ಥ, ಸಪ್ತಸಾಗರ, ನದಿಇಂಗಳಗಾಂವ ಗ್ರಾಮಗಳ ಹತ್ತಿರದಲ್ಲಿಯೇ ಕೃಷ್ಣಾ ನೀರು ಬಂದಿರುವುದರಿಂದ ಈ ಗ್ರಾಮಗಳಿಗೆ ಯಾವುದೇ ಸಂದರ್ಭದಲ್ಲಿ ನೀರು ನುಗ್ಗಬಹುದು. ಹೀಗಾಗಿ ಈ ನಾಲ್ಕು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಾಲೂಕು ಆಡಳಿತ ಸನ್ನದ್ಧ ಸ್ಥಿತಿಯಲ್ಲಿದೆ.
ತಾಲೂಕಾಡಳಿತ ಸಭೆ:ನೆರೆ ಪರಿಸ್ಥಿತಿ ಎದುರಾಗಿರುವುದರಿಂದ ತಹಸೀಲ್ದಾರ್ ನೇತೃತ್ವದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ನೋಡಲ್ ಅಧಿಕಾರಿಗಳ ಸಭೆ ನಡೆಸಿದರು.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳು ಜವಾಬ್ದಾರಿ ವಹಿಸಿದ ಗ್ರಾಮಗಳಲ್ಲಿ ಇರಬೇಕು. ಜನರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿಯ ಮೇಲೆ ನಿಗಾ ವಹಿಸಲು, ನಿರಂತರವಾಗಿ ತಾಲೂಕು ಆಡಳಿತದೊಂದಿಗೆ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಥಮ ಹಂತದಲ್ಲಿ ಯಾವ ಯಾವ ಗ್ರಾಮಗಳು ಮುಳುಗಡೆ ಆಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಜನರ ಸ್ಥಳಾಂತರಕ್ಕೆ 7 ಬೋಟ್ ಸಿದ್ಧವಾಗಿವೆ. ಇನ್ನೂ ಹೆಚ್ಚಿನ ಬೋಟ್‌ಗಳ ಅವಶ್ಯಕತೆ ಬಿದ್ದರೆ ತರಿಸಲಾಗುವುದು. ಎಲ್ಲೆಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಎಂಬುದನ್ನು ಗುರುತಿಸಲಾಗಿದೆ. ಅಲ್ಲದೆ, ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಬಿಸಿ ಊಟ ಅಧಿಕಾರಿಗಳಿಗೆ ಯಾವುದೇ ಕ್ಷಣ ಬೇಡಿಕೆ ಬಂದರೂ ಊಟದ ಪೂರೈಕೆಗೆ ಸದಾ ಸಿದ್ಧರಾಗಿರಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ತಾಪಂ ಇಒ ಶಿವಾನಂದ ಕಲ್ಲಾಪೂರ, ಗ್ರೇಡ್ 2 ತಹಸೀಲ್ದಾರ್ ಶ್ರೀಶೈಲ್ ಗುಡಮಿ, ನೀರಾವರಿ ಇಲಾಖೆ ಎಂಜಿನಿಯರ್ ಪ್ರವೀಣ ಹುಣಸಿಕಟ್ಟಿ, ಸಿಪಿಐ ರವೀಂದ್ರ ನಾಯ್ಕೋಡಿ, ಹೋಸಕೇರಿ ಮತ್ತು ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ, ಎಂ.ಎಸ್. ಯೇತನಟ್ಟಿ ಉಪಸ್ಥಿತರಿದ್ದರು.
ತಾಪಂ ಇಒ ಶಿವಾನಂದ ಕಲ್ಲಾಪೂರ ಕನ್ನಡಪ್ರಭದೊಂದಿಗೆ ಮಾತನಾಡಿ, ನದಿ ತೀರದ ಎಲ್ಲ ಗ್ರಾಮಗಳಲ್ಲಿ ಪಿಡಿಒಗಳು ನೀರಿನ ಮಟ್ಟ ನಿಯಂತ್ರಣಕ್ಕೆ ಬರುವರಿಗೆ ಗ್ರಾಮದಲ್ಲೇ ವಾಸ್ತವ್ಯ ಮಾಡಬೇಕು. ಏನೇ ಸಮಸ್ಯೆಯಾದರೂ ಪಿಡಿಒಗಳೇ ಹೊಣೆಗಾರರು ಎಂದು ತಿಳಿಸಿದ್ದೇವೆ ಎಂದು ಹೇಳಿದರು.ನದಿದಡಕ್ಕೆ ಹೋಗದಂತೆ ಮನವಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷ್ಣಾ ಹಾಗೂ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಾರ್ವಜನಿಕರು ನದಿ ತೀರದತ್ತ ಹೋಗಬಾರದು. ಜಾನುವಾರಗಳನ್ನು ಬಿಡಬಾರದು. ಜಿಲ್ಲಾಡಳಿತ ಸೂಚಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು. ನೆರೆ ಹಾವಳಿ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಧೈರ್ಯಗೆಡಬಾರದು, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಕೊಯ್ನಾ ಹೊರ ಹರಿವು ಆರಂಭ:ಗುರುವಾರ ಮಧ್ಯಾಹ್ಯ್ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 11ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದು, ಶುಕ್ರವಾರದ ವೇಳೆ ಸುಮಾರು 50 ಸಾವಿರ ಕ್ಯುಸೆಕ್ ದಾಟುವ ಸಾಧ್ಯತೆ ಇದೆ.
ಮಹಾದಲ್ಲಿ ನಿಲ್ಲದ ಮಳೆಯ ಆರ್ಭಟ ಮಳೆ: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರದಲ್ಲಿ 307 ಮಿಮೀ, ನವಜಾ-237 ಮಿಮೀ, ರಾಧಾನಗರಿ 202 ಮಿಮೀ, ಕೊಯ್ನಾ 163 ಮಿಮೀ, ವಾರಣಾ 172 ಮಿಮೀ, ಕಾಳಮ್ಮವಾಡಿಯಲ್ಲಿ 142ಮಿಮೀ ಮಳೆಯಾದ ವರದಿಯಾಗಿದೆ.