ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಹಿಂದೂ ಧರ್ಮ ಮಾನವೀಯತೆಯ ಧರ್ಮ. ಇದಕ್ಕೆ ಯಾರೂ ವಾರಸುದಾರರಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹೇಳಿದರು.ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಭವನದಲ್ಲಿ ಸುವರ್ಣ ರಾಜ್ಯ ಶಿವಾರ್ಚಕ ಪ್ರಗತಿಪರ ಸಂಘದ ವತಿಯಿಂದ ಏರ್ಪಡಿಸಿದ್ದ ನಿವೃತ್ತ ಯೋಧರಿಗೆ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಧರ್ಮ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುತ್ತದೆ. ಹಿಂದೂ ಸಂಸ್ಕೃತಿಗೆ 6 ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ಕೆಲವರು ಹಿಂದೂ ಧರ್ಮದ ವಾರಸುದಾರರಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಸಂಸ್ಕೃತಿಗೆ ಯಾರೂ ವಾರಸುದಾರರಿಲ್ಲ ಎಂದರು.ಆಧುನಿಕ ಯುಗದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಜ್ಞಾನಕ್ಕಿಂತ ಭಾರತದ ಆಧ್ಯಾತ್ಮ ಮುಂದಿದೆ ಎಂದು ವಿಶ್ವ ಸಂಸ್ಥೆಯು ಒಪ್ಪಿಕೊಂಡಿದೆ. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಶಿವಾರ್ಚಕರು ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಕೂಡ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಅದರಲ್ಲಿಯೂ ನಿವೃತ್ತ ಯೋಧರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವವರನ್ನು ಗುರುತಿಸಿ ಸನ್ಮಾನಿಸಿರುವುದು ಅರ್ಥಪೂರ್ಣ ಎಂದರು.
ಇದೇ ವೇಳೆ ನಿವೃತ್ತ ಯೋಧ ವಿ.ಟಿ. ಸಿದ್ದಪ್ಪ, ಮಧುಕರ್, ಶುಭೋದಯ ಆಸ್ಪತ್ರೆಯ ಡಾ.ಎಚ್.ಪಿ. ರಾಘವೇಂದ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಸನ್ಮಾನಿಸಲಾಯಿತು.ಡಾ.ರುದ್ರೇಶ್ ಪ್ರಸಾದ್ ಗುರೂಜಿ ಸಾನ್ನಿಧ್ಯವಹಿಸದ್ದರು. ಸಂಘದ ಅಧ್ಯಕ್ಷ ಬನ್ನೂರು ನಾಗರಾಜ್ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಅರುಣ್ ಕುಮಾರ್, ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ಎ. ಮಲ್ಲಣ್ಣ, ವಿ.ಎಚ್.ಪಿ ಅಧ್ಯಕ್ಷ ಸೋಮಣ್ಣ, ಪ್ರದೀಪ್, ಅಂಬಳೆ ಶಿವಣ್ಣ, ಪುಟ್ಟಬಸಪ್ಪ, ಸುಬ್ರಹ್ಮಣ್ಯ ಮೊದಲಾದವರು ಇದ್ದರು.