ಸುಂಟಿಕೊಪ್ಪ ಹೋಬಳಿ: ಕಾಡಾನೆ ಹಾವಳಿ ವಿಪರೀತ

| Published : Jul 26 2024, 01:36 AM IST

ಸಾರಾಂಶ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂದಲೆ ಮುಂದುವರಿದಿದ್ದು, ಫಸಲುಭರಿತ ಬೆಳೆಗಳನ್ನು ತಿಂದು ತುಳಿದು ನಾಶಪಡಿಸುತ್ತಿವೆ. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು- ಉಪ್ಪುತೋಡು ನಿವಾಸಿ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವನ್ ಎಂಬವರ ತೋಟಕ್ಕೆ ಎಡೆಬಿಡದೆ ಕಳೆದ ಮೂರು ದಿನಗಳಿಂದ ಕಾಡಾನೆ ಬಂದು ಉಪಟಳ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂದಲೆ ಮುಂದುವರಿದಿದ್ದು, ಫಸಲುಭರಿತ ಬೆಳೆಗಳನ್ನು ತಿಂದು ತುಳಿದು ನಾಶಪಡಿಸುತ್ತಿವೆ.

7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು- ಉಪ್ಪುತೋಡು ನಿವಾಸಿ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವನ್ ಎಂಬವರ ತೋಟಕ್ಕೆ ಎಡೆಬಿಡದೆ ಕಳೆದ ಮೂರು ದಿನಗಳಿಂದ ಕಾಡಾನೆಯೊಂದು ತೆಂಗಿನ ಮರಗಳನ್ನು ಬಗ್ಗಿಸಿ ಕಪಾತು ಮಾಡಿದ ರೀತಿಯಲ್ಲಿ ಮಾಡಿ ಹಿಂತಿರುಗಿದೆ. ಮನೆಯ ಅನತಿ ದೂರದಲ್ಲಿರುವ ಈ ಮರವನ್ನು ಖಾಲಿ ಮಾಡುವವರೆಗೂ ಪ್ರತಿನಿತ್ಯ ಬಂದು ಹೋಗಿರುವ ಕಾಡಾನೆ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿದೆ.

ಸಮೀಪದ ಕಾನ್ ಬೈಲ್ ಬೈಚನಹಳ್ಳಿಯ ನೆಟ್ಲಿ ಬಿ ತೋಟದಲ್ಲಿ ಹಗಲು ವೇಳೆಯಲ್ಲಿ ಕಾಫಿ ಗಿಡದ ನಡುವೆ ನಿಂತಿದ್ದು, ಕಾರ್ಮಿಕರೊಬ್ಬರೂ ನೋಡಿದ ಪರಿಣಾಮ ಅನಾಹುತ ತಪ್ಪಿದೆ.

ಸಮೀಪದ ಕೆಳಪನ್ಯ ತೋಟದಲ್ಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ವಿಷಯವರಿತ ತೋಟದ ಮಾಲೀಕರು ಕೆಲಸದಿಂದ ವಾಪಾಸಾಗುವಂತೆ ಕಾರ್ಮಿಕರಿಗೆ ತಿಳಿಸಿದ ಕೂಡಲೇ ಕಾರ್ಮಿಕರು ಅಲ್ಲಿಂದ ಮನೆಯತ್ತ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಮತ್ತು ದಾಂದಲೆ ಮಿತಿಮೀರಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.