ಸಾರಾಂಶ
- ಮೈದುಂಬಿದ ತುಂಗಭದ್ರಾ । ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತುಂಗಾ, ಭದ್ರಾ ನದಿಗಳ ಅಚ್ಚುಕಟ್ಟು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಶೃಂಗೇರಿ, ತೀರ್ಥಹಳ್ಳಿ ಮುಂತಾದ ಕಡೆಗಳಲ್ಲಿ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಇದರಿಂದಾಗಿ ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ. ಭಾನುವಾರ ಇಡೀ ರಾತ್ರಿ ಮಳೆ ಬಂದ ಹಿನ್ನೆಲೆ ದಾವಣಗೆರೆ ಜಿಲ್ಲಾದ್ಯಂತ ಸೋಮವಾರ ಶಾಲಾ- ಕಾಲೇಜುಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಲಾಗಿತ್ತು.ತುಂಗಭದ್ರಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಅವಳಿ ತಾಲೂಕಿನಾದ್ಯಂತ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. 2 ದಿನಗಳ ಹಿಂದೆ 5.0 ಮೀಟರ್ ಇದ್ದ ತುಂಗಭದ್ರಾ ನದಿ ನೀರು ಹರಿವಿನ ಮಟ್ಟ ನಿರಂತರ ಮಳೆಯಿಂದಾಗಿ ಸೋಮವಾರ ಮಧ್ಯಾಹ್ನದ ವೇಳೆಗೆ 10.500 ಮೀಟರ್‌ಗೆ ಏರಿಕೆ ಕಂಡಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತ ಸೂಚಿಸಿದೆ.
ವಿವಿಧೆಡೆ ಮಳೆ ವಿವರ:ಭಾನುವಾರ ಹೊನ್ನಾಳಿಯಲ್ಲಿ 10.4 ಮಿ.ಮೀ., ಸವಳಂಗ-17.1, ಬೆಳಗುತ್ತಿ- 19.6, ಹರಳಹಳ್ಳಿ-10.4, ಗೋವಿನಕೋವಿ-15.2, ಕುಂದೂರು-15.4, ಸಾಸ್ವೇಹಳ್ಳಿ- 11.2 ಮಿಮೀ ಸೇರಿದಂತೆ ಒಟ್ಟು 99.3 ಮಿ.ಮೀ., ಸರಾಸರಿ 14.1 ಮಿ.ಮೀ. ಮಳೆ ಸಂಭವಿಸಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಮತ್ತೆ ಕಾಳಜಿ ಕೇಂದ್ರ ಪ್ರಾರಂಭ:ಭಾರಿ ಮಳೆಯಿಂದ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಬಳಿ ಕೆಲ ಮನೆಗಳ ಬಳಿಗೆ ನದಿ ನೀರು ತಲುಪಿದೆ. ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ 8 ಕುಟುಂಬಗಳ ಒಟ್ಟು 33 ಸಂತ್ರಸ್ತರಿಗೆ ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ತಹಸೀಲ್ದಾರ್ ರಾಜೇಶ್‌ಕುಮಾರ್ ತಿಳಿಸಿದ್ದಾರೆ.
- - --18ಎಚ್.ಎಲ್.ಐ2.ಜೆಪಿಜಿ: ಹೊನ್ನಾಳಿ ಬಳಿ ತುಂಗಭದ್ರಾ ನದಿ ನೀರು ಬಾಲರಾಜ್ ಘಾಟ್ ಜನವಸತಿ ಪ್ರದೇಶ ಬಳಿಗೆ ಹರಿದು ಬಂದಿರುವುದು. -18ಎಚ್.ಎಲ್.ಐ2ಎ.ಜೆಪಿಜಿ: ಹೊನ್ನಾಳಿಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದು.
- - -* ಉಕ್ಕಡಗಾತ್ರಿ ಸ್ನಾನಘಟ್ಟ ಮುಳುಗಡೆ
ಮಲೇಬೆನ್ನೂರು: ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಭಾನುವಾರ ಬೆಳಗ್ಗೆಯಿಂದ ಏರಿಕೆಯಾಗಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ.ಆಶ್ಲೇಷ ಮಳೆಯಿಂದ ೨೬ ದಿನಗಳ ಹಿಂದೆ ಈ ನದಿಯಲ್ಲಿ ನೀರು ಏರಿಕೆಯಾಗಿತ್ತು. ಈಗ ತಿಂಗಳೊಳಗೆ 2ನೇ ಬಾರಿ ಆ.೧೮ರ ಸಂಜೆ ಸೋಮವಾರ ಮತ್ತೆ ನದಿಯಲ್ಲಿ ನೀರು ಏರಿಕೆಯಾಗಿದ್ದು, ಕೆಂಪುಮಣ್ಣು ಮಿಶ್ರಿತ ನೀರು ಹರಿಯುತ್ತಿದೆ.ಶ್ರೀ ಕರಿಬಸವೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸಿದ ಭಕ್ತರು ನದಿ ದೂರದಲ್ಲಿಯೇ ಸ್ನಾನ ಮಾಡುವಂತೆ, ನದಿಗೆ ಇಳಿಯದಂತೆ ಸೂಚನೆ ನೀಡಲು ಆಡಳಿತ ಮಂಡಳಿ ಸ್ವಯಂ ಸೇವಕರನ್ನು ನೇಮಿಸಿದೆ. ಧ್ವನಿವರ್ಧಕ ಮೂಲಕವೂ ಜಾಗೃತಿ ಪ್ರಚಾರ ಮಾಡುತ್ತಿದೆ.ನದಿ ಪಾತ್ರದಲ್ಲಿ ನಿಷೇಧಾಜ್ಞೆ -ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಎರಡನೇ ಬಾರಿ ನದಿ ಪಾತ್ರ ಮತ್ತು ಹರಿಹರ ನಗರದ ಜನತೆಗೆ ಎಚ್ಚರಿಕೆ ನೀಡಿ, ಆ. ೧೮ರಿಂದ ಆ ೩೦ರವರೆಗೆ ತಹಸೀಲ್ದಾರ್ ಗುರುಬಸವರಾಜ್ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ.
ತುಂಗಭದ್ರಾ ನದಿಗೆ ಇಳಿಯದಂತೆ, ಜಾನುವಾರುಗಳ ಸ್ನಾನ ಮಾಡಿಸದಂತೆ, ಈಜಾಡದಂತೆ ಸೂಚಿಸಲಾಗಿದೆ. ನದಿಪಾತ್ರದ ಮತ್ತು ಭದ್ರಾ ನಾಲಾ ವ್ಯಾಪ್ತಿಯ ಗ್ರಾಮಗಳಾದ ಉಕ್ಕಡಗಾತ್ರಿ, ಮಳಲಹಳ್ಳಿ, ಗೋವಿನಹಾಳು. ಎಳೆಹೊಳೆ, ಇಂಗಳಗೊಂದಿ, ನಂದಿಗುಡಿ, ಪಾಳ್ಯ, ನಂದಿಗಾವಿ, ಬಿಳಸನೂರು, ಹುಲುಗಿನಹೊಳೆ, ರಾಜನಹಳ್ಳಿ, ಹಲಸಬಾಳು, ತೊಮ್ಲಾಪುರ, ಗುತ್ತೂರು, ದೀಟೂರು, ಪಾಮೇನಹಳ್ಳಿ, ಚಿಕ್ಕಬಿದರಿ ಜನತೆಗೆ ತಹಸೀಲ್ದಾರ್ ಸೂಚಿಸಿ, ಆದೇಶ ಮಾಡಿದ್ದಾರೆ.- - --ಚಿತ್ರ೧.ಜೆಪಿಜಿ:ತುಂಗಭದ್ರಾ ನದಿ ನೀರು ಏರಿಕೆಯಿಂದ ಉಕ್ಕಡಗಾತ್ರಿ ಸ್ನಾನಘಟ್ಟ ಮುಳುಗಿರುವುದು.