ಸಾರಾಂಶ
ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಮತ್ತು ಕಂಪ್ಲಿ ಮಧ್ಯೆ ತುಂಗಭದ್ರಾ ಸೇತುವೆ ಮೇಲೆ ಅಧಿಕ ನೀರು ಬಂದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿದ್ದು, ಸಚಿವ ಶಿವರಾಜ ತಂಗಡಗಿ ವೀಕ್ಷಿಸಿದರು.
ಗಂಗಾವತಿ: ತಾಲೂಕಿನ ಚಿಕ್ಕಜಂತಗಲ್ ಮತ್ತು ಕಂಪ್ಲಿ ಮಧ್ಯೆ ತುಂಗಭದ್ರಾ ಸೇತುವೆ ಮೇಲೆ ಅಧಿಕ ನೀರು ಬಂದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿದ್ದು, ಸಚಿವ ಶಿವರಾಜ ತಂಗಡಗಿ ವೀಕ್ಷಿಸಿದರು. ಇದಕ್ಕಿಂತ ಪೂರ್ವದಲ್ಲಿ ಕಾರಟಗಿ ತಾಲೂಕಿನ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಿಸಿದ ಸಚಿವರು ಸೇತುವೆ ಮೇಲೆ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಸೂಚಿಸಿದರು.
ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಂಗಾವತಿ-ಕಂಪ್ಲಿ ಸೇತುವೆ ಮೇಲೆ ತುಂಗಭದ್ರಾ ನದಿ ನೀರು ಬರುತ್ತಿದ್ದರಿಂದ ಪ್ರತಿ ವರ್ಷ ಜನರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕಾರಣಕ್ಕಾಗಿ ಸೇತುವೆ ಎತ್ತರಿಸಲು ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಹೇಳಿದರು.ಈ ಹಿಂದೆ ಇದ್ದ ಬಿಜೆಪಿ ಅಧಿಕಾರದಲ್ಲಿದ್ದಾಗ ಸೇತುವೆ ಬಗ್ಗೆ ಗಮನ ಹರಿಸಲಿಲ್ಲ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಸ್ತೆ, ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ ಎಂದರು.
ಕನಕಗಿರಿ ಮತ್ತು ಗಂಗಾವತಿ ತಾಲೂಕಿನಲ್ಲಿ ನದಿ ಪ್ರವಾಹದಿಂದಾಗಿ ನಷ್ಟವಾದ ಬಗ್ಗೆ ವರದಿ ಕೇಳಲು ಜಿಲ್ಲಾಧಿಕಾರಿ, ಸಿಇಒ, ತಹಸೀಲ್ದಾರ್, ಪಿಡಿಒ ಸಭೆಯನ್ನು ಆ. 3ರಂದು ಕರೆಯಲಾಗಿದೆ ಎಂದು ತಿಳಿಸಿದರು.ತಹಸೀಲ್ದಾರ್ ಯು. ನಾಗರಾಜ, ಚಿಕ್ಕಜಂತಗಲ್ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ವೆಂಕೋಬ ಭಂಗಿ, ರೇಣುಕಗೌಡ ಅಯೋದ್ಯ, ಪಿಡಿಒ ಮಲ್ಲಿಕಾರ್ಜುನ ಕಡಿವಾಳ, ಕಾರ್ಯದರ್ಶಿ ರವೀಂದ್ರನಾಥ ಇದ್ದರು.