ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮ್ಮನಹಳ್ಳಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 100 ಅಡಿ ಬೃಹತ್ ಕಟೌಟ್ ಅಳವಡಿಸಿ ಸಂಭ್ರಮಾಚರಿಸದರು.
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಿಸಿದರು.
100 ಅಡಿ ಕಟೌಟ್ ನಿಲ್ಲಿಸಿ ವಿವಿಧ ಹೂವುಗಳಿಂದ ಶೃಂಗಾರ
ಮಾಗಡಿ ರಸ್ತೆಯ ಸುಮ್ಮನಹಳ್ಳಿ ಸರ್ಕಲ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರ 100 ಅಡಿ ಕಟೌಟ್ ನಿಲ್ಲಿಸಿ ವಿವಿಧ ಹೂವುಗಳಿಂದ ಶೃಂಗಾರಿಸಲಾಗಿತ್ತು. ವಿವಿಧ ಕಲಾತಂಡಗಳ ಸಂಭ್ರಮಾಚರಣೆಗೆ ಮೆರುಗು ನೀಡಿದವು. ಕೆಪಿಸಿಸಿ ವಕ್ತಾರರಾದ ಎಚ್.ಕುಸುಮಾ ಅವರ ಅಭಿಮಾನಿಗಳು ಅಲ್ಲಲ್ಲಿ ಪೆಂಡಲ್ ಹಾಕಿ ಕುಡಿಯುವ ನೀರು, ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಬೃಹತ್ ಎಲ್‌ಇಡಿ ಪರದೆ ಅಳವಡಿಸಿ ನೂತನ ಸಿಎಂ ಮತ್ತು ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.
ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಾರೆ
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಅವರು, ಬಡವರು, ಶ್ರಮಿಕರು, ಕಾರ್ಮಿಕರ, ರೈತರ ಸಮಸ್ಯೆ, ನೋವು ನಲಿವನ್ನು ಕಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಕೊಟ್ಟಿಗೆಪಾಳ್ಯ ಎನ್.ಶೇಖರ್ ಮಾತನಾಡಿ, ಸಂಘಟನೆಯ ಚತುರ ಡಿ.ಕೆ.ಶಿವಕುಮಾರ್ ಅವರಿಂದ ನಾಡು, ನುಡಿ, ನೆಲ, ಜಲ ರಕ್ಷಣೆ, ವಿಶಾಲ ಕರ್ನಾಟಕದ ಅಭಿವೃದ್ಧಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಲಗ್ಗೆರೆ ಪಾಲಿಕೆ ಮಾಜಿ ಸದಸ್ಯೆ ರೂಪ ಲಿಂಗೇಶ್ವರ್, ಕಾಂಗ್ರೆಸ್ ಮುಖಂಡರಾದ ಕೆ.ಗಿರೀಶ್‌ಗೌಡ, ರಮೇಶ್‌ಗೌಡ, ಮುರಳಿ ಪ್ರೇಮ್, ಪಶ್ಚಿಮ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಲ್.ಪ್ರವೀಣ್ ಕುಮಾರ್, ಎನ್‌ಎಸ್‌ಯುಐ ಆರ್.ಆರ್.ನಗರ ಕ್ಷೇತ್ರದ ಅಧ್ಯಕ್ಷ ಚರಣ್‌ಗೌಡ, ವಾರ್ಡ್ ಅಧ್ಯಕ್ಷ ಚೇತನ್ ಸೇರಿದಂತೆ ಇತರರು ಇದ್ದರು.
