ಸಾರಾಂಶ
ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು ೮೦೦೦ ಸಂಖ್ಯೆಯ ವಿವಿಧ ಬಗೆಯ ಹೂವಿನ ಗಿಡಗಳನ್ನು ಉದ್ಯಾನವನದ ಪಾತಿಗಳಲ್ಲಿ ಮತ್ತು ವಿವಿಧ ಅಳತೆಯ ಪಾಟುಗಳಲ್ಲಿ ಬೆಳೆಸಲಾಗಿದ್ದು, ಮರಗಳ ಸುತ್ತ ಹಾಗೂ ಸಮೂಹಗಳಲ್ಲಿ ಆಕರ್ಷಕವಾಗಿ ಜೋಡಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ತಿಳಿಸಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿ ಶ್ರೀ ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ, ಗರುಡಗಂಬ ಮತ್ತು ದೀಪವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಲಾಗುತ್ತಿದೆ ಎಂದರು. ತೆಂಗು ಬೆಳೆಯಲ್ಲಿ ರೋಗ/ಕೀಟ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆಯನ್ನು ಏರ್ಪಡಿಸಿದ್ದು, ತಾಂತ್ರಿಕ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಶ್ರೀ ಹಾಸನಾಂಬೆ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅ.17ರಿಂದ ಅ.20ರವರೆಗೆ ಫಲಪುಷ್ಪ ಪ್ರದರ್ಶನವನ್ನು ನಗರದ ಸಿಲ್ವರ್ ಜುಬಿಲಿ ಪಾರ್ಕ್‌ನಲ್ಲಿ ಏರ್ಪಡಿಸಲಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ ತಿಳಿಸಿದ್ದಾರೆ.ಹಾಸನ ನಗರದ ಸಿಲ್ವರ್ ಜುಬಿಲಿ ಪಾರ್ಕ್‌ನಲ್ಲಿ ಮಂಗಳವಾರ ಫಲಪುಷ್ಪ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಗಣರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವದಂತಹ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಮಾಡುತ್ತಿದ್ದೆವು. ಕಳೆದ ವರ್ಷದಿಂದ ಹಾಸನಾಂಬೆ ಜಾತ್ರೆಗೆ, ದೇವಿ ದರ್ಶನಕ್ಕೆ ಬಂದಿರುವ ಭಕ್ತರಿಗೆ ಹಾಸನದ ಜನತೆಗೆ ನೋಡುವುದಕ್ಕೆ ಅನುಕೂಲವಾಗಲೆಂದು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದ ತಿಳಿಸಿದರು.ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು ೮೦೦೦ ಸಂಖ್ಯೆಯ ವಿವಿಧ ಬಗೆಯ ಹೂವಿನ ಗಿಡಗಳನ್ನು ಉದ್ಯಾನವನದ ಪಾತಿಗಳಲ್ಲಿ ಮತ್ತು ವಿವಿಧ ಅಳತೆಯ ಪಾಟುಗಳಲ್ಲಿ ಬೆಳೆಸಲಾಗಿದ್ದು, ಮರಗಳ ಸುತ್ತ ಹಾಗೂ ಸಮೂಹಗಳಲ್ಲಿ ಆಕರ್ಷಕವಾಗಿ ಜೋಡಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ತಿಳಿಸಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿ ಶ್ರೀ ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ, ಗರುಡಗಂಬ ಮತ್ತು ದೀಪವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಲಾಗುತ್ತಿದೆ ಎಂದರು.ದಿನನಿತ್ಯ ಬಳಸಿ ಎಸೆಯುವ ಅನೇಕ ವಸ್ತುಗಳಾದ ಪ್ಲಾಸ್ಟಿಕ್ , ಡ್ರಮ್ಮುಗಳು, ಟೈರುಗಳು, ಮರದ ತುಂಡುಗಳು, ಹಳೇ ವಾಹನಗಳು ಇತ್ಯಾದಿ ಅನುಪಯುಕ್ತ ವಸ್ತುಗಳನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಬದಲಾಗಿ ಹಳೆಯ, ಉಪಯೋಗಿಸಿದ ಈ ರೀತಿಯ ಉತ್ಪನ್ನಗಳನ್ನು ಬಳಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸುತ್ತಿದ್ದು, ಜನರಲ್ಲಿ ತ್ಯಾಜ್ಯ ವಸ್ತುಗಳ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.ಹಾಸನ ಜಿಲ್ಲೆಯಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರ ಆರ್ಥಿಕತೆಯ ಮೂಲಾಧಾರವಾಗಿದೆ. ಇತ್ತೀಚೆಗೆ ಹಲವು ರೋಗ ಕೀಟ ಬಾಧೆಯಿಂದ ತೆಂಗಿನಲ್ಲಿ ಇಳುವರಿ ಕುಂಠಿಗೊಳ್ಳುತ್ತಿದ್ದು, ರೈತರು ಸಂಕಷ್ಟದಲ್ಲಿರುತ್ತಾರೆ. ಅದರಂತೆ ತೆಂಗು ಬೆಳೆಯಲ್ಲಿ ರೋಗ/ಕೀಟ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆಯನ್ನು ಏರ್ಪಡಿಸಿದ್ದು, ತಾಂತ್ರಿಕ ಮಾಹಿತಿ ಪಡೆಯಬಹುದಾಗಿದೆ ಎಂದರು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷವಾಕ್ಯದೊಂದಿಗೆ ನೈಸರ್ಗಿಕ ಸಂಪನ್ಮೂಲಗಳಾದ ಭೂಮಾತೆ, ಸೂರ್ಯ,ಹೇಮಾವತಿ, ನೀರಿನ ಝರಿಗಳನ್ನು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿ ಪ್ರದರ್ಶಿಸಲಾಗುವುದು. ಶ್ರೇಷ್ಠ ಕವಿಗಳು, ತಾರೆಯರು, ಗಾಯಕರು ಹಾಗೂ ಪ್ರಸಿದ್ಧ ರಾಜಕಾರಣಿಗಳ ಭಾವಚಿತ್ರವನ್ನು ತರಕಾರಿ ಕೆತ್ತನೆಯ ಮೂಲಕ ಪ್ರದರ್ಶಿಸಲಾಗುವುದು. ಜೊತೆಗೆ ರಾಧಾ-ಕೃಷ್ಣ, ಬಲರಾಮ, ಮಕ್ಕಳಿಗೆ ಅತಿ ಪ್ರಿಯವಾದ ಐಸ್ ಕ್ರೀಂ ಕೋನುಗಳ ಮಾದರಿ, ಡಾಲ್ಫಿನ್, ಬಾತುಕೋಳಿಗಳನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಖಾಸಗಿ ಸಂಘಸಂಸ್ಥೆಗಳು ತಾಂತ್ರಿಕ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ಮಾಹಿತಿ ದೊರೆಯಲಿದೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರದ ಜನತೆಗೆ ಅಲಂಕಾರಿಕ ತೋಟದ ನಿರ್ವಹಣೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅಲಂಕಾರಿಕ ತೋಟ ನಿರ್ವಹಣೆ, ಅನುಪಯುಕ್ತ ವಸ್ತುಗಳನ್ನು ಬಳಸಿ ತೋಟದ ಸೌಂದರ್ಯವನ್ನು ಹೆಚ್ಚಿಸುವುದು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.ಸಾರ್ವಜನಿಕರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನದ ಪ್ರಾರಂಭದಿಂದ ಮುಕ್ತಾಯವಾಗುವವರಗೆ ಪ್ರತಿದಿನ ಸಂಜೆ ೭ ಗಂಟೆಯಿಂದ ೦೯ ಗಂಟೆಯವರಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಶುಲ್ಕವಿದ್ದು, ವಯಸ್ಕರಿಗೆ ರು.೨೦ಗಳನ್ನು ಹಾಗೂ ಮಕ್ಕಳಿಗೆ ರು. ೧೦ ಗಳ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಖಾಸಗಿ ಅಥವಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿ ಬಂದರೆ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.ಅ.೧೭ರಂದು ಫಲಪುಷ್ಪ ಪ್ರದರ್ಶನ ಉದ್ಘಾಟನೆಯನ್ನು ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ನೆರವೇರಿಸುತ್ತಿದ್ದು, ಪುಷ್ಪ ಕಲಾಕೃತಿಗಳನ್ನು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಉದ್ಘಾಟಿಸುವರು, ಪ್ರದರ್ಶನಾ ಮಳಿಗೆಗಳನ್ನು ಸಂಸದರಾದಶ್ರೇಯಸ್, ಎಂ. ಪಟೇಲ್ ನೆರವೇರಿಸಲಿದ್ದು, ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಇತರೆ ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿರುವರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷರಾದ ಸುಜಾತ ನಾರಾಯಣ್, ತೋಟಗಾರಿಕೆ ಉಪನಿರ್ದೇಶಕರು ಹಾಗೂ ಹೇಮಾವತಿ ತೋಟಗಾರಿಕೆ ಸಂಘದ ನಿರ್ದೇಶಕರಾದ ಯೋಗೇಶ್ ಎಚ್.ಆರ್, ಹಾಸನ ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಹೇಮಾವತಿ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿಗಳಾದ ಭಾನುಪ್ರಕಾಶ್ ಬಿ.ಇ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಪವಿತ್ರ ಜಿ.ಎನ್ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.