ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಕೆರೆಗಳು ತುಂಬಿರುವ ಕಾರಣ ತಂಪಿನ ಪ್ರಮಾಣ ಹೆಚ್ಚಾಗಿದೆ. ಇನ್ನೊಂದೆಡೆ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಶೀತಗಾಳಿ, ಚಳಿ ಪ್ರಮಾಣ ನಾಲ್ಕೈದು ದಿನಗಳಿಂದ ತೀವ್ರವಾಗಿ ಹೆಚ್ಚಿದ್ದರಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಹಲವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ.

ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಕೆರೆಗಳು ತುಂಬಿರುವ ಕಾರಣ ತಂಪಿನ ಪ್ರಮಾಣ ಹೆಚ್ಚಾಗಿದೆ. ಇನ್ನೊಂದೆಡೆ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಜನರಲ್ಲಿ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ವೃದ್ಧರಲ್ಲಿ ಅಸ್ತಮಾ ತೊಂದರೆಗಳು ಹೆಚ್ಚಾಗಿವೆ. ತಂಪಾದ ಗಾಳಿ ಮತ್ತು ಹೆಚ್ಚು ತೇವಾಂಶವು ಸೋಂಕಿಗೆ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಪೋಷಕರು ಮುಂಜಾನೆ ಸಂಜೆ ವೇಳೆ ಮಕ್ಕಳಿಗೆ ಬೆಚ್ಚಗಿಡುವಂತಹ ಬಟ್ಟೆ ಮತ್ತು ಬಿಸಿ ನೀರು ನೀಡುವಂತೆ ಸಲಹೆ ನೀಡಿದ್ದಾರೆ.

ಹಿರಿಯರಲ್ಲಿ ಆರೋಗ್ಯ ಸಂಕಷ್ಟ: ವಯಸ್ಕರಲ್ಲಿ ಕಫ ಸಮಸ್ಯೆ, ಸೈನಸ್ ನೋವು, ರಕ್ತದ ಒತ್ತಡದಲ್ಲಿ ವ್ಯತ್ಯಾಸ, ಮಧುಮೇಹ ಹೃದಯರೋಗಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಿರಿಯರಿಗೆ ಕೈಕಾಲು ಜುಮ್ಮು ಹಿಡಿಯುವುದು, ಮೂಳೆನೋವು, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಚಳಿಯಿಂದ ಮನೆ ಇಲ್ಲದೆ ಜೋಪಡಿಗಳಲ್ಲಿ ವಾಸವಿರುವವರಿಗೆ ಶೀತ ಗಾಳಿಯ ನೇರ ಪರಿಣಾಮಕ್ಕೆ ತುತ್ತಾಗುತ್ತಿದ್ದಾರೆ. ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಇಳಿಯುವ ಹೈಪೋಥರ್ಮಿಯಾ ಪ್ರಕರಣಗಳು ಹೆಚ್ಚಾಗುವ ಭೀತಿ ಇದೆ. ಹಳೆಯ ಕಾಯಿಲೆಗಳ ತೀವ್ರಗತಿ, ಉಸಿರಾಟದ ತೊಂದರೆ ಮತ್ತು ರಾತ್ರಿ ತಂಗಲು ಸ್ಥಳದ ಕೊರತೆ ಮನೆರಹಿತರಿಗೆ ದೊಡ್ಡ ಸಂಕಷ್ಟವಾಗಿದೆ. ಇವರಿಗೆ ಜಿಲ್ಲಾಡಳಿತ ಬ್ಲ್ಯಾಂಕೆಟ್ ಹಾಗೂ ತಾತ್ಕಾಲಿಕ ವಸತಿ ಕಲ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಬೆಳೆಗಳಿಗೆ ರೋಗಬಾಧೆ:

ತಾಪಮಾನ ಕುಸಿತ ಮತ್ತು ಹೆಚ್ಚಿದ ತೇವಾಂಶದಿಂದ ಧಾನ್ಯ, ಬೀಜ, ತರಕಾರಿ ಬೆಳೆಗಳಲ್ಲಿ ಬೆಳವಣಿಗೆ ನಿಧಾನವಾಗಿದೆ. ಟೊಮೆಟೋ, ಬೀನ್ಸ್, ಬದನೆಕಾಯಿ, ಹೂ ಬೆಳೆಗಳಲ್ಲಿ ಪದೇ ಪದೇ ಕೀಟಬಾಧೆ ಕಾಣಿಸಿಕೊಳ್ಳುತ್ತಿವೆ. ಬೈಟ್, ಮಿಲ್‌ಡ್ಯೂ, ವಿಲ್ಫ್, ಎಲೆಕಲೆ ರೋಗಗಳು ತರಕಾರಿ ಬೆಳೆಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿವೆ.

ಸಾಕುಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆ: ಚಳಿಯಿಂದ ದನ, ಮೇಕೆ-ಕುರಿಗಳಲ್ಲಿ ಹಾಲು ಉತ್ಪಾದನೆ, ಮಾಂಸ ಶೇಖರಣೆ ಕುಂದಿದ್ದು, ಹೊಸದಾಗಿ ಜನಿಸಿದ ಕರು, ಮೇಕೆ, ಕುರಿಗಳಿಗೆ ತೀವ್ರ ಚಳಿಯ ಅಪಾಯ ಹೆಚ್ಚಾಗಿದೆ. ಕೋಳಿ ಸಾಕಾಣಿಕೆಯಲ್ಲೂ ರೋಗಗಳ ಭೀತಿ ಹೆಚ್ಚಾಗಿದೆ. ರೇಷ್ಮೆ ಉತ್ಪಾದನೆಯಲ್ಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಳೆ ರಕ್ಷಣೆಗಾಗಿ ರೈತರು ಹೆಚ್ಚಿನ ನಿಗಾ ವಹಿಸಿ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳ ಹತ್ತಿರ ಸೂಕ್ತ ಸಲಹೆ ಪಡೆಯಬೇಕಿದೆ.

ಚಳಿಯ ಈ ಅವಧಿಯಲ್ಲಿ ಆರೋಗ್ಯ ಜಾಗೃತಿ, ಮನೆರಹಿತರಿಗೆ ಬೆಚ್ಚಗಿರುವ ವ್ಯವಸ್ಥೆ ಮತ್ತು ರೈತರಿಗೆ ತಾಂತ್ರಿಕ ಬೆಂಬಲ ಅಗತ್ಯವಿದೆ. ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಆರೋಗ್ಯ ಮತ್ತು ಕೃಷಿ ಎರಡೂ ಕ್ಷೇತ್ರಗಳಲ್ಲಿ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಜ್ಞರು ಹೇಳುತ್ತಾರೆ.

ಎಚ್ಚರ ವಹಿಸಿ: ಚಳಿಯಿಂದಾಗಿ ಶೀತ, ಜ್ವರ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಹಾಗೂ ಸಂಧಿ ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳಿತು ಎಂದು ವೈದ್ಯರಾದ ಡಾ. ಪ್ರಕಾಶ ಹೊಸಮನಿ ತಿಳಿಸಿದರು.