ಸಾರಾಂಶ
ಶಿಕಾರಿಪುರ: ಯಡಿಯೂರಪ್ಪನವರ ರೈತ ಪರವಾದ ಚಿಂತನೆ ಕಾಳಜಿಯ ಫಲವಾಗಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ತುಂಗಾ ನದಿಯಿಂದ ಅಂಜನಾಪುರ ಜಲಾಶಯಕ್ಕೆ ನೀರು ತರುವ ಏತ ನೀರಾವರಿ ಯೋಜನೆ ಜಾರಿಯಾಗಿದ್ದು, ರೈತರ ಸಹಿತ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಜಲಾಶಯದ ನೀರು ಒದಗಿಸುವ ಯೋಜನೆ ಜಾರಿಗೊಳಿಸಿದ ಯಡಿಯೂರಪ್ಪನವರ ಜತೆಗೆ ಶ್ರಮಿಸಿದ ಸಂಸದ ರಾಘವೇಂದ್ರರಿಗೆ ಅಭಿನಂದಿಸುವುದಾಗಿ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸೋಮವಾರ ತಾಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಪತ್ನಿ ಪ್ರೇಮ ಜತೆಗೂಡಿ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನಂತರದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಭಗವಂತನ ಕೃಪೆಯಿಂದ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನದಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ದೊರೆತು ರೈತರ ಕುಟುಂಬ ನೆಮ್ಮದಿ ಮೂಲಕ ಸುಖವಾಗಿರಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರಿಗೆ 15-20 ದಿನಗಳ ಕಾಲ ನೀರಿನ ಅಗತ್ಯವಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಗಳು ಕಾಲುವೆಯನ್ನು ದುರಸ್ತಿ, ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹಾಯಲು ಎಲ್ಲ ರೀತಿಯ ಸಿದ್ಧತೆಗೆ ತುರ್ತು ಕ್ರಮ ಕೈಗೊಳ್ಳಬೇಕು. ರೈತರು ನೆಮ್ಮದಿ, ಸ್ವಾಭಿಮಾನದಿಂದ ಬದುಕಲು ಅಗತ್ಯ ಗಮನ ಹರಿಸುವಂತೆ ಸೂಚಿಸಿದರು.ಸಂಸದ ರಾಘವೇಂದ್ರ ಮಾತನಾಡಿ, ತಾಲೂಕಿನ ಎಲ್ಲ ಹೋಬಳಿಗೆ ಏತ ನೀರಾವರಿ ಯೋಜನೆ ಜಾರಿಗೊಳಿಸಿ ರೈತರಿಗೆ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಿದ ಸಂತೃಪ್ತಿಯನ್ನು ಹೊಂದಿದ್ದು, ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಡಿ ಎತ್ತರ ಹೆಚ್ಚಿಸಿದ್ದು ಪ್ರಮುಖ ಕಾರಣ ಎಂದರು.
ಯಡಿಯೂರಪ್ಪನವರ ಸಹಕಾರ ಹಾಗೂ ರೈತ ಪರ ಕಾಳಜಿಯಿಂದ ತಾಲೂಕಿನ ಉಡುಗಣಿ ಹೊಸೂರು, ತಾಳಗುಂದ ಹಾಗೂ ಕಸಬಾ ಹೋಬಳಿಗಳಿಗೆ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ನೀರಾವರಿ ಯೋಜನೆ ಅನುಷ್ಠಾನ ಮೂಲಕ ರೈತರಿಗೆ ನೆಮ್ಮದಿ ನೀಡುವ ಕೆಲಸ ಆಗಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ರೈತ ಪರ ಯೋಜನೆ ನೀಡಿದ್ದಾರೆ. ಶರಾವತಿ ಸಂತ್ರಸ್ತರಿಗೆ ಸಿಗಂದೂರು ಸಮೀಪ ಸೇತುವೆ ನಿರ್ಮಾಣವಾಗಿದ್ದು, ಜುಲೈ 14ರ ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.
ಇದೇ ವೇಳೆ ಅಂಜನಾಪುರ ವ್ಯಾಪ್ತಿಯ ಹಾರೋಗೊಪ್ಪ ಗ್ರಾಪಂಯಿಂದ ಅಧ್ಯಕ್ಷೆ ಕವಿತಾ ಹಾಲೇಶ್ ಹಾಗೂ ಸದಸ್ಯರು ಸಂಸದ ಹಾಗೂ ಶಾಸಕರನ್ನು ಸನ್ಮಾನಿಸಿದರು.ವೇದಿಕೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ತೇಜಸ್ವಿನಿ ರಾಘವೇಂದ್ರ, ಪುರಸಭೆ ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ರೂಪಾ, ಮುಖಂಡ ಕೊಳಗಿ ರೇವಣಪ್ಪ, ಸಂಕ್ಲಾಪುರ ಹನುಮಂತಪ್ಪ, ಹುಲ್ಮಾರ್ ಮಹೇಶ್, ಚನ್ನವೀರಪ್ಪ, ವಸಂತಗೌಡ, ದೂದಿಹಳ್ಳಿ ಬಸವರಾಜ್, ಶಶಿಧರ್ ಚುರ್ಚಿಗುಂಡಿ, ಬಿ.ಡಿ.ಭೂಕಾಂತ್, ಸುಧೀರ್ ಮಾರವಳ್ಳಿ, ತೊಗರ್ಸಿ ಹನುಮಂತಪ್ಪ, ನಿಂಬೆಗೊಂದಿ ಸಿದ್ದಲಿಂಗಪ್ಪ, ಗಿರೀಶ್ ಧಾರಾವಾಡ, ನಾಗರಾಜ ಕೊರಲಹಳ್ಳಿ, ಅಂಜನಾಪುರ ಅಶೋಕ್, ಗಾಯತ್ರಿದೇವಿ, ರೇಖಾ ರಾಜಶೇಖರ್, ರೂಪ ಸಹಿತ ನೀರಾವರಿ ಇಲಾಖೆ ಎಇಇ ಮಂಜುನಾಥ್, ನಾಗೇಶಪ್ಪ, ಬಾಲರಾಜ್ ಮತ್ತಿತರರಿದ್ದರು.