ಸುರಕ್ಷಿತ, ಶುದ್ಧ ನೀರು ಪೂರೈಕೆಗೆ ಗಮನ ಹರಿಸಿ

| Published : Jun 26 2024, 12:39 AM IST

ಸಾರಾಂಶ

ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಗೂ ನಲ್ಲಿ ಅಳವಡಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ನೀರಿನ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಯಾ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಗಮನ ಹರಿಸಬೇಕೆಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ವ್ಹಿ.ಬಿ.ಗೊಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಗೂ ನಲ್ಲಿ ಅಳವಡಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ನೀರಿನ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಯಾ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಗಮನ ಹರಿಸಬೇಕೆಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ವ್ಹಿ.ಬಿ.ಗೊಂಗಡಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿರುವ ಸಭಾ ಭವನದಲ್ಲಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಮೂಲಕ ಮತ್ತು ಶುದ್ಧ ಹಾಗೂ ಸುರಕ್ಷಿತ ನೀರು ಗ್ರಾಮಗಳಲ್ಲಿ ನೀರನ್ನು ಪೂರೈಕೆ ಮಾಡುವ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಜಲಜೀವನ ಮಿಷನ್ ಯೋಜನೆಯ ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನರು ನೀರನ್ನು ಮಿತವಾಗಿ ಬಳಸುವುದರ ಮೂಲಕ ನೀರಿನ ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಜಲಮೂಲವನ್ನು ಸುಸ್ಥಿರವಾಗಿಟ್ಟುಕೊಳ್ಳುವ ಜೊತೆಗೆ ನೀರು ಮಲಿನವಾಗದಂತೆ ನೋಡಿಕೊಳ್ಳಬೇಕು. ನೀರಿನ ಭದ್ರತೆ, ಶುದ್ಧ ಕುಡಿಯುವ ನೀರಿನ ಪೂರೈಕೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಮಾತನಾಡಿ, ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಸಾಕಷ್ಟು ಎದುರಿಸಿದ್ದಾರೆ. ಇದನ್ನು ದೂರ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಜಲಜೀವನ ಮಿಷನ್ ಯೋಜನೆ ಕಾರ್ಯಕ್ರಮ ಕೊಟ್ಟಿರುವುದು ಶ್ಲಾಘನೀಯ. ಈ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ನಲ್ಲಿಗಳ ಮೂಲಕ ಶುದ್ಧ ನೀರಿನ ಸೌಲಭ್ಯ ದೊರಕಬೇಕು. ಶುದ್ಧ ನೀರು ಪೂರೈಕೆಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ. ನೀರಿನ ಮಹತ್ವದ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.

ಆರೋಗ್ಯ ಇಲಾಖೆಯ ಆರ್.ಎಂ.ಚಿಂಚೋಳಿ ಮತ್ತು ಸಂಜೀವ ಸಜ್ಜನ ಅವರು ಮಳೆಗಾಲದಲ್ಲಿ ಹೊಸ ನೀರು ಬರುವುದರಿಂದಾಗಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನೀರು ಬಳಕೆ ಮಾಡಬೇಕು. ವಾಂತಿ-ಬೇಧಿಯಾಗುವ ಸಂಭವವಿರುವುದರಿಂದಾಗಿ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನೀರು ಬಳಕೆ ಮಾಡಬೇಕು. ಜನರು ಆದಷ್ಟು ಶುದ್ಧವಾದ ನೀರನ್ನು ಬಳಸಬೇಕು. ನೀರು ಅಮೌಲ್ಯವಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ವೇದಿಕೆಯಲ್ಲಿ ಕೊಲ್ಹಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಇದ್ದರು. ಕಾರ್ಯಾಗಾರದಲ್ಲಿ ಐಆರ್‌ಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಬಡಿಗೇರ, ಸಿದ್ದಪ್ಪ ಮಾದರ, ಭೀಮಶಿ ಲೋಕಾಪುರ, ಬಸವರಾಜ ನಿಂಬರಗಿ, ಜಿಲ್ಲಾ ಪ್ರಯೋಗಾಲಯ ಸಹಾಯಕರಾದ ಸಂದೀಪ ಹಳ್ಳೂರ, ಮಂಜುನಾಥ ಸೇರಿದಂತೆ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಲಜೀವನ ಮಿಷನ್‌ದ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.