ಸಾರಾಂಶ
ಚಿತ್ರದುರ್ಗ: ಅದ್ಧೂರಿ ಮದುವೆಯಾಗುವ ಬದಲು ಆದರ್ಶ ವಿವಾಹದ ಕಡೆ ಗಮನಹರಿಸುವುದು ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು. ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಗುರುವಾರ ನಡೆದ 34ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮುರುಘಾಮಠದಲ್ಲಿ ಮದುವೆ ಆಗುವುದೆಂದರೆ ಸಾಕ್ಷಾತ್ ಬಸವಣ್ಣನವರ ಎದುರು ಮದುವೆ ಆದಂತೆ. ಆರಂಭದಲ್ಲಿ ಮದುವೆಯಾದವರ ಮಕ್ಕಳು, ಮೊಮ್ಮಕ್ಕಳ ಮದುವೆಯಾಗಿದೆ ಎಂದು ತಿಳಿಸಿದರು.
ಎಲ್ಲಿಯೋ ಹೋಗಿ ಕೋಟಿ ಖರ್ಚು ಮಾಡಿ ಮದುವೆ ಮಾಡುವುದು ಸಹ ಅಪರಾಧ ಇದ್ದ ಹಾಗೆ. ಸಂಗ್ರಹ ಮಾಡುವುದು ಸಹ ಕಳ್ಳತನ ಮಾಡಿದ ಹಾಗೆ. ಬಸವಾದಿ ಶರಣರ ಆದರ್ಶದ ಬದುಕನ್ನು ಅಳವಡಿಸಿಕೊಳ್ಳುವುದು ಮುಖ್ಯ. ಶ್ರೀಮಠದಲ್ಲಿ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಜನ ಪ್ರಸಾದ ಸ್ವೀಕರಿಸುತ್ತಾರೆ. ಶ್ರೀಮಠವು ಶೈಕ್ಷಣಿಕ ಕ್ರಾಂತಿ ಮಾಡಿದೆ. ಹಾಗಾಗಿ ಶ್ರೀಮಠದ ಬಗ್ಗೆ ತಾವೆಲ್ಲರೂ ಗೌರವ ಇಟ್ಟುಕೊಳ್ಳಬೇಕು ಎಂದರು. ಶ್ರೀ ಬಸವ ಮಹಾಂತ ಸ್ವಾಮಿಗಳು ಮಾತನಾಡಿ, ಅನ್ನ ಕೊಡುವ ರೈತ ಇಂದು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಜೀವನ ಎಂದರೆ ಬರುವ ಕಷ್ಟಗಳನ್ನು ದಂಪತಿಗಳಿಬ್ಬರು ಸಹಿಸಿಕೊಳ್ಳಬೇಕು. ತವರುಮನೆ ಬಿಟ್ಟು ಗಂಡನೇ ದೇವರೆಂದು ನಂಬಿ ಬಂದಿರುತ್ತಾಳೆ. ನಂಬಿ ಬಂದವರನ್ನು ಪ್ರೀತಿಯಿಂದ ಕಾಣಬೇಕು. ಸುಖ, ದುಃಖ ಎಲ್ಲರ ಜೀವನದಲ್ಲಿ ಬರುತ್ತವೆ. ಮದುವೆ ಮಾಡುವುದು ಇಂದು ಕಷ್ಟದ ಕೆಲಸ. ಆದರೆ ಶ್ರೀಮಠವು ಆಸರೆಯಾಗಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಡಾ.ಬಸವಪ್ರಭು ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ ಮಾತನಾಡಿದರು.ಧಾರವಾಡ ಇನ್ನರ್ ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಶೃತಿ ಭೂಸನೂರಮಠ, ತೇರದಾಳ ಶ್ರೀಗಳು, ಸೋಮವಾರ ಪೇಟೆ ಶ್ರೀಗಳು, ಧಾರವಾಡ ಇನ್ನರ್‌ವ್ಹೀಲ್ ಕ್ಲಬ್‍ನ ಕಾರ್ಯದರ್ಶಿ ಎಸ್.ರೂಪ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನಪ್ಪ ವೇದಿಕೆಯಲ್ಲಿದ್ದರು.ಇದೇ ವೇಳೆ 11 ಜೋಡಿ ವಧೂವರರು ದಾಂಪತ್ಯಕ್ಕೆ ಅಡಿ ಇಟ್ಟರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಗುರುಮಠಕಲ್‍ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ವಂದಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.