ಜನನ, ಮರಣಗಳ ನೋಂದಣಿ ಕಡ್ಡಾಯ: ಡೀಸಿ

| Published : Dec 06 2024, 09:00 AM IST

ಸಾರಾಂಶ

ಆಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣ, ಅದನ್ನು ನೋಂದಾಯಿಸಿ ಉಚಿತ ಜನನ ಪ್ರಮಾಣಪತ್ರ ನೀಡಲಾಗುವುದು. ಅದಕ್ಕಾಗಿ ಉಪ ನೋಂದಣಿ ಘಟಕಗಳನ್ನು ಆರಂಭಿಸಲಾಗಿದೆ. ಅನಗತ್ಯವಾಗಿ ನೋಂದಣಿ ವಿಳಂಬ ತಪ್ಪಿಸಲು, ಜನನ ಹಾಗೂ ಮರಣ ಘಟಿಸಿದ ಸ್ಥಳದಲ್ಲಿಯೇ ನೋಂದಣಿ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರ‘ಕರ್ನಾಟಕ ಜನನ ಮತ್ತು ಮರಣ ನೋಂದಣಿ ನಿಯಮಗಳು ೨೦೨೩ ಅಧಿಸೂಚನೆಯಂತೆ, ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ಶೇ.೧೦೦ರಷ್ಟು ಸಾಧಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಜನನ ಹಾಗೂ ಮರಣವನ್ನು ಕಡ್ಡಾಯವಾಗಿ ೨೧ ದಿನದೊಳಗೆ ನೋಂದಾಯಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಜನನ ಮರಣ ನೋಂದಣಿ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜನನ ಹಾಗೂ ಮರಣವಾದ ೨೧ ದಿನದೊಳಗೆ ಕಡ್ಡಾಯವಾಗಿ ನೋಂದಾಯಿಸಿ ಪ್ರಮಾಣಪತ್ರ ಉಚಿತವಾಗಿ ನೀಡಬೇಕು’ ಎಂದರು.ಸಕಾಲಕ್ಕೆ ವರದಿ ಸಲ್ಲಿಸಿ

‘ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ ಹಾಗೂ ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನನ ಮರಣ ನೋಂದಣಾಧಿಕಾರಿಗಳು ಅಥವಾ ಉಪ ನೋಂದಣಾಧಿಕಾರಿಗಳು ಸಂಬಂಧಿಸಿದ ಪ್ರದೇಶಗಳ ವರದಿಗಳನ್ನು ಸಕಾಲದಲ್ಲಿ ಸಲ್ಲಿಸಬೇಕು. ಅವುಗಳನ್ನು ಸಂರಕ್ಷಿಸಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.ನಾಗರಿಕ ನೋಂದಣಿ ಪದ್ಧತಿಯಡಿ, ಪ್ರತಿ ತಾಲ್ಲೂಕಿನಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಮರಣಗಳಿಗೆ ಕಾರಣ ಕುರಿತ ವೈದ್ಯಕೀಯ ಪ್ರಮಾಣಪತ್ರದ (ನಮೂನೆ ೪/೪ಎ) ವರದಿಯನ್ನು ಜನನ ಮತ್ತು ಮರಣಗಳ ಮುಖ್ಯ ನೋಂದಣಾಧಿಕಾರಿಗೆ ಸಲ್ಲಿಸಬೇಕು ಎಂದು ಹೇಳಿದರು.ಜನನ ಪ್ರಮಾಣಪತ್ರ ಉಚಿತ

ಆಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣ, ಅದನ್ನು ನೋಂದಾಯಿಸಿ ಉಚಿತ ಜನನ ಪ್ರಮಾಣಪತ್ರದೊಂದಿಗೆ ತಾಯಿ-ಮಗುವನ್ನು ಮನೆಗೆ ಕಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ ಉಪ ನೋಂದಣಿ ಘಟಕಗಳನ್ನು ಆರಂಭಿಸಲಾಗಿದೆ. ಅನಗತ್ಯವಾಗಿ ನೋಂದಣಿ ವಿಳಂಬ ತಪ್ಪಿಸಲು, ಜನನ ಹಾಗೂ ಮರಣ ಘಟಿಸಿದ ಸ್ಥಳದಲ್ಲಿಯೇ ನೋಂದಣಿ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.‘ಇ- ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗದೆ ಬಾಕಿ ಉಳಿದ ಘಟನೆಗಳನ್ನು ನೋಂದಾಯಿಸಲು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಕಚೇರಿಯ ಸಹಾಯಕ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಬೇಕು. ಬಾಕಿ ಜನನ? ಮರಣ ಘಟನೆಗಳನ್ನು ನಮೂನೆಗಳಲ್ಲಿ ಲಭ್ಯವಿರುವ ವರದಿಯನ್ನು ದೃಢೀಕರಿಸಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಬಾಕಿ ಇರುವ ೩೫ ಜನನ ಹಾಗೂ ಮರಣ ಘಟನೆಗಳ ವರದಿಯನ್ನು ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ ಜಿಲ್ಲಾ ಸಾಂಖ್ಯಿಕ ಅಧಿಕಾರಿ ರಮೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ಇದ್ದರು.