25 ವರ್ಷಗಳಿಂದ ಜೋಪಡಿಯಲ್ಲಿ ವಾಸ, ಸಿಗುತ್ತಿಲ್ಲ ಆಶ್ರಯ ಮನೆ

| Published : Dec 06 2024, 09:00 AM IST

25 ವರ್ಷಗಳಿಂದ ಜೋಪಡಿಯಲ್ಲಿ ವಾಸ, ಸಿಗುತ್ತಿಲ್ಲ ಆಶ್ರಯ ಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡ್ಲಿಗಿ ತಾಲೂಕು ಹುರುಳಿಹಾಳ್ ಗ್ರಾಪಂ ವ್ಯಾಪ್ತಿಗೆ ಸೇರಿದ ವಲಸೆ ಗ್ರಾಮದ ತುಪ್ಪಲಬೋರಯ್ಯರ ನಾಗರಾಜ ಅವರ ಕುಟುಂಬ 25 ವರ್ಷಗಳಿಂದ ಜೋಪಡಿಯಲ್ಲಿ ವಾಸ ಮಾಡುತ್ತಿದ್ದು, ಸರ್ಕಾರದ ಯಾವ ವಸತಿ ಯೋಜನೆಯಲ್ಲೂ ಈ ಕುಟುಂಬಕ್ಕೆ ಮನೆ ಸಿಕ್ಕಿಲ್ಲ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಈ ಕುಟುಂಬ 25 ವರ್ಷಗಳಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದರೂ ಈ ವರೆಗೆ ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಆಶ್ರಯ ಲಭಿಸಿಲ್ಲ.

ಸರ್ಕಾರ ಎಸ್ಸಿ-ಎಸ್ಟಿ ಜನರ ಕಲ್ಯಾಣಕ್ಕೆ ಸಾವಿರಾರು ಕೋಟಿಗಟ್ಟಲೇ ಅನುದಾನ ಖರ್ಚು ಮಾಡುತ್ತಿದ್ದರೂ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿ.

ತಾಲೂಕಿನ ಹುರುಳಿಹಾಳ್ ಗ್ರಾಪಂ ವ್ಯಾಪ್ತಿಗೆ ಸೇರಿದ ವಲಸೆ ಗ್ರಾಮದ ತುಪ್ಪಲಬೋರಯ್ಯರ ನಾಗರಾಜ ಅವರ ಕುಟುಂಬ ಪ್ರಾಣಿಗಳು ಸಹ ವಾಸಮಾಡಲು ಯೋಗ್ಯವಿಲ್ಲದ ಗುಡಿಸಲಿನಲ್ಲಿ ವಾಸ ಮಾಡುತ್ತಿದೆ. ಪತ್ನಿ ಪಾಪಮ್ಮ, 6 ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾರೆ. ಈ ಗುಡಿಸಲು ಸಹ ಊರು ಬಿಟ್ಟು 1 ಕಿ.ಮೀ. ದೂರದಲ್ಲಿದೆ. ಹಾವು-ಚೇಳುಗಳು, ಕಾಡುಪ್ರಾಣಿಗಳ ಜತೆ ವಾಸ ಮಾಡುತ್ತಿದೆ.

8 ವರ್ಷಗಳ ಹಿಂದೆ ವಿದ್ಯುತ್ ಅವಘಡದಿಂದ ಅವರ ಗುಡಿಸಲು ಸುಟ್ಟು ಭಸ್ಮವಾಯಿತು. ಆ ಬಳಿಕ ಈ ಕುಟುಂಬ ಇನ್ನಷ್ಟು ದುಸ್ಥಿತಿಗೆ ತಲುಪಿತು. ಅಲ್ಲಿಯ ವರೆಗೆ ಮನೆಯ ಸುತ್ತಲೂ ಇದ್ದ ಕಲ್ಲುಬಂಡೆಯೂ ಇಲ್ಲದಂತಾಯಿತು. ಮನೆ ಸುತ್ತಲೂ ನೆಲದಿಂದಲೇ ತೆಂಗಿನ ಗರಿಗಳಿಂದಲೇ ಜೋಪಡಿ ನಿರ್ಮಿಸಿಕೊಂಡಿದ್ದಾರೆ. ಸೋರದಂತೆ ಹೊದೆಸಿದ ಪ್ಲಾಸ್ಟಿಕ್‌ ಕೂಡ ಈಗ ಹಾಳಾಗಿದೆ. ಈ ಕುಟುಂಬದ ಇಬ್ಬರು ಬಾಲಕಿಯರು ಈಗ ಆರ್ಥಿಕ ಶಕ್ತಿಯಿಲ್ಲದೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಇಂಥವರ ನೆರವಿಗೆ ಬರಬೇಕು ಎಂಬುದು ಸ್ಥಳೀಯ ಪ್ರಜ್ಞಾವಂತರ ಆಗ್ರಹವಾಗಿದೆ.

ಮಕ್ಕಳನ್ನು ಶಾಲೆ ಬಿಡಿಸಿದ್ದೇವೆ: ಇರೋಕೆ ಮನೆ ಇಲ್ಲ, ಮನೆ ಕೊಡಿ ಎಂದು ಕೇಳಿದರೆ ಬಚ್ಚಲು ಮನೆ ಕೊಡ್ತೀವಿ ಎಂದು ಗ್ರಾಪಂನವ್ರು ಹೇಳ್ದಾರೆ. ಅದನ್ ತಗೊಂಡು ಏನ್ ಮಾಡೋದ್? ಮೂರು ಎಕ್ರೆ ಜಮೀನು ಇದೆ, ಅದೂ ಅಜ್ಜನ ಹೆಸರಲ್ಲಿದೆ. ಸರ್ಕಾರದ ಯಾವ ಪರಿಹಾರವೂ ಬರ್ತಿಲ್ಲ. ಮಳೆ ಅಷ್ಟಕ್ಕಷ್ಟೆ. ಹೊಲದಲ್ಲಿ ಬೆಳೆಯೋದು ಊಟಕ್ಕೆ ಆಗುತ್ತದೆ. ಜೀವನ ಮಾಡೋಕೆ ಕಷ್ಟ. ಇಬ್ಬರು ಹೆಣ್ಣುಮಕ್ಕಳನ್ನು ಶಾಲೆ ಬಿಡಿಸಿದ್ದೇವೆ. ಅವರು ಬೇವಿನ ಬೀಜ, ಹೊಂಗೆ ಬೀಜ ಆನ್ಸುತ್ತಾರೆ. ನಾವು ಕೂಲಿ ಮಾಡಿ ಜೀವನ ಮಾಡ್ತಿದ್ದೀವಿ ಎನ್ನುತ್ತಾರೆ ವಲಸೆ ಗ್ರಾಮದ ತುಪ್ಪಲಬೋರಯ್ಯರ ನಾಗರಾಜ ಪತ್ನಿ ಪಾಪಮ್ಮ.

ವಲಸೆ ಗ್ರಾಮದ ಈ ಕುಟುಂಬ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, 8 ವರ್ಷಗಳ ಹಿಂದೆ ಗುಡಿಸಲು ಸುಟ್ಟಾಗ ₹5 ಸಾವಿರ ಪರಿಹಾರ ನೀಡಿದ್ದೆವು. ಅಲ್ಲಿಂದ ಒಂದೇ ಸಾರಿ ಮನೆಗಳು ಬಂದಿದ್ದವು. ಪರಿಶಿಷ್ಟ ಪಂಗಡಕ್ಕೆ ಮನೆಗಳು ಕಡಿಮೆ ಬಂದಿದ್ದವು. ಹೀಗಾಗಿ ಅವರಿಗೆ ಮನೆ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕುಟುಂಬಕ್ಕೆ ಆಶ್ರಯ ಮನೆ ನೀಡಲಾಗುವುದು ಎಂದು ಹುರುಳಿಹಾಳ್ ಪಿಡಿಒ ಕವಿತಾ ಹೇಳಿದರು.