ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಜಾನಪದ ಕಲೆಯು ಎಲ್ಲಾ ಕಲೆಗಳಿಗೂ ತಾಯಿಬೇರಿದ್ದಂತೆ. ದೊಡ್ಡ ಶಕ್ತಿ ಇರುವ ಜಾನಪದ ಕಲೆ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್ ಹೇಳಿದರು.ತಾಲೂಕಿನ ಹೆಗ್ಗಡಹಳ್ಳಿ ಬಯಲು ರಂಗಮಂದಿರದಲ್ಲಿ ಮಂಡ್ಯದ ಜಾನಪದ ಜನ್ನೆಯರು ಸಂಘಟನೆಯಿಂದ ಆಯೋಜಿಸಿದ್ದ ಜಾನಪದ ಜನ್ನೆ ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ ಮಾತನಾಡಿ, ಜಾನಪದವು ಪುರಾತನ ಕಾಲದ ಈ ಮಣ್ಣಿನಲ್ಲಿ ಹುಟ್ಟಿದ ಕಲೆಯಾಗಿದೆ. ಸಾಹಿತ್ಯ ಹಾಗೂ ಕಲೆಗಳಿಗೆ ಇದು ಮೂಲ ಬೇರು. ಮಾನವನ ಹುಟ್ಟಿನೊಂದಿಗೆ ಜಾನಪದ ಕಲೆ ಉಗಮವಾಗಿದೆ ಎಂದರು.
ಗರತಿ ಹಾಡುಗಳಿಂದ ಹುಟ್ಟಿದ ಈ ಜಾನಪದ ಕಲೆ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡು ಬೆಳೆಯುತ್ತಿದೆ. ಜಾನಪದದಲ್ಲಿ ವಿವಿಧ ಪ್ರಕಾರಗಳಿವೆ. ಆದರೆ, ಇತ್ತೀಚಿನ ಮಾಧ್ಯಮಗಳ ಹಾವಳಿಗಳಿಂದಾಗಿ ಜಾನಪದದ ಕೆಲವು ಪ್ರಕಾರಗಳು ಉಳಿದಿಲ್ಲ ಎಂದು ವಿಷಾದಿಸಿದರು.ಈ ಹಿಂದೆ ಹಳ್ಳಿಗಳಲ್ಲಿ ರಾಗಿ ಬೀಸುವಾಗ ಹಾಗೂ ಮದುವೆ ಹಾಗೂ ಇತರೆ ಶುಭ ಕಾರ್ಯಗಳಲ್ಲಿ ತಾಯಂದಿರುವ ಸೋಪಾದೆ ಪದ ಹಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವುಗಳು ಮಾಯವಾಗಿವೆ. ಈ ಮಧ್ಯೆಯೂ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆ ಹಾಗೂ ಅದರ ಪ್ರಕಾರಗಳು ಇನ್ನೂ ಉಳಿದಿವೆ. ಇದು ಸಮಾಧಾನಕಾರ ಸಂಗತಿಯಾಗಿದೆ ಎಂದರು.
ಜಾನಪದ ಕಲೆಗಳು ನಮ್ಮ ಮಣ್ಣಿನಲ್ಲಿ ಉಳಿಯಬೇಕಾಗಿದೆ. ಇತ್ತೀಚೆಗೆ ನಮ್ಮ ತಾಯಂದಿರು ಜಾನಪದ ಕಲೆಗಳನ್ನು ಬಿಟ್ಟು ಸರ್ಕಾರ ಕರುಣಿಸಿರುವ ಬಿಟ್ಟಿ ಭಾಗ್ಯಗಳಿಂದಾಗಿ ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಮುಂದಿನ ತಲೆಮಾರಿಗೆ ಜಾನಪದ ಕಲೆಯನ್ನು ಉಳಿಸಲು ಮುಂದಾಗಬೇಕು ಎಂದರು.ತಾಲೂಕಿನಲ್ಲಿ ಡಾ.ಕ್ಯಾತನಹಳ್ಳಿ ರಾಮಣ್ಣ ಹಾಗೂ ಡಾ.ಜಯಲಕ್ಷ್ಮೀ ಸೀತಾಪುರ ಅವರು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಹೆಗ್ಗಡೆ ಕೃಷ್ಣೇಗೌಡರು ಜಾನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಕಲಾವಿದರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಜಾನಪದ ಕಲೆ ಬೆಳೆಸಿದ್ದಾರೆ. ಡಾ.ಎಚ್.ಎಲ್.ನಾಗೇಗೌಡರು ಜಾನಪದ ಲೋಕ ಕಟ್ಟಿದ್ದಾರೆ ಎಂದರು.
ಜಾನಪದದ ಅನೇಕ ಕಲಾ ಪ್ರಕಾರಗಳನ್ನು ನೋಡಬಹುದು. ಅದೇ ರೀತಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹೆಗ್ಗಡಹಳ್ಳಿ ಚಿಕ್ಕಮಾದಮ್ಮ ಅವರನ್ನು ಜಾನಪದ ಜನ್ನೇಯರು ಸಂಘಟನೆಯವರು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಾನಪದ ಜನ್ನೆ ಸಂಘಟನೆ ಅಧ್ಯಕ್ಷೆ ಡಾ.ಎಸ್.ಸಿ.ಮಂಗಳಾ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಾನಪದ ಕಲಾವಿದೆ ಚಿಕ್ಕಮಾದಮ್ಮ ಅವರಿಗೆ 5ನೇ ವರ್ಷದ ‘ಜಾನಪದ ಜನ್ನೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಐದು ಸಾವಿರ ನಗದು, ಸೀರೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಇದೇ ವೇಳೆ ಡಾ. ಮೀರಾಶಿವಲಿಂಗಯ್ಯ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರು ಹಾಗೂ ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರು ಇವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಹೆಗ್ಗಡಹಳ್ಳಿ ಸೋಭಾನೆ ಕೃಷ್ಣೇಗೌಡ, ಜಾನಪದ ಜನ್ನೆಯರು ಸಂಘಟನೆ ಉಪಾಧ್ಯಕ್ಷೆ ಜಿ.ಉಷಾರಾಣಿ, ಖಜಾಂಚಿ ಛಾಯಾ, ಡಾ.ಟಿ.ವಿ.ತೇಜಸ್ವಿನಿ, ಡಾ.ಎನ್.ಎಸ್.ದೇವಿಕಾ, ಡಾ. ಅನುಸೂಯ ಹೊಂಬಾಳೆ, ಡಾ.ಎನ್.ರಮ್ಯ, ಡಿ.ಪಿ.ಶಿಲ್ಪ ಕೃಷ್ಣಗೌಡ, ಎ.ಸಿ.ಮಾನಸ, ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ ಇತರರಿದ್ದರು.