ಕಲಾವಿದರ ಹಾಡುಗಳನ್ನು ಕೇಳುತ್ತಿದ್ದರೆ ಜನಪದ ಕಲೆ ಎಂದಿಗೂ ನಶಿಸುವುದಿಲ್ಲ: ಪ್ರೊ.ಹಿ.ಚಿ.ಬೋರಲಿಂಗಯ್ಯ

| Published : Sep 24 2024, 01:54 AM IST

ಕಲಾವಿದರ ಹಾಡುಗಳನ್ನು ಕೇಳುತ್ತಿದ್ದರೆ ಜನಪದ ಕಲೆ ಎಂದಿಗೂ ನಶಿಸುವುದಿಲ್ಲ: ಪ್ರೊ.ಹಿ.ಚಿ.ಬೋರಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನ ನಿಜವಾದ ಸಾಂಸ್ಕೃತಿಕ ಜೀವಾಳ ಯಾರಾದರೂ ಇದ್ದರೆ ಜನಪದ ಕಲಾವಿದರು ಮಾತ್ರ ಎಂಬುದನ್ನು ಮನಗಂಡು ಭೈರವೈಕ್ಯ ಶ್ರೀಗಳು ಕಳೆದ 44 ವರ್ಷಗಳ ಹಿಂದೆ ಆರಂಭಿಸಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳ ಅಂದಿನಿಂದ ಇಂದಿನವರೆಗೂ ಬಹಳ ಅರ್ಥಪೂರ್ಣವಾಗಿ ನಡೆದುಕೊಂಡು ಬರುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಶ್ರೀಕ್ಷೇತ್ರದಲ್ಲಿ ಸೇರಿರುವ ಕಲಾವಿದರು ಹಾಡುವ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮ ಜನಪದ ಕಲೆ ಎಂದಿಗೂ ನಶಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ 3 ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಜಾನಪದ ಕಲೆ ನಶಿಸಿ ಹೋಗುತ್ತಿದೆ, ಹೊಸ ಕಾಲಕ್ಕೆ ಜಾನಪದ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಆದಿಚುಂಚನಗಿರಿ ಕ್ಷೇತ್ರದ ಧಾರ್ಮಿಕ ಮಠ ಮೂಲ ಕಲೆ ಉಳಿಸಿ ಪೋಷಿಸುತ್ತಿದೆ. ಇದರಿಂದ ಜನಪದ ಕಲೆ ಎಂದಿಗೂ ನಶಿಸುವುದಿಲ್ಲ ಎಂದರು.

ನಾಡಿನ ನಿಜವಾದ ಸಾಂಸ್ಕೃತಿಕ ಜೀವಾಳ ಯಾರಾದರೂ ಇದ್ದರೆ ಜನಪದ ಕಲಾವಿದರು ಮಾತ್ರ ಎಂಬುದನ್ನು ಮನಗಂಡು ಭೈರವೈಕ್ಯ ಶ್ರೀಗಳು ಕಳೆದ 44 ವರ್ಷಗಳ ಹಿಂದೆ ಆರಂಭಿಸಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳ ಅಂದಿನಿಂದ ಇಂದಿನವರೆಗೂ ಬಹಳ ಅರ್ಥಪೂರ್ಣವಾಗಿ ನಡೆದುಕೊಂಡು ಬರುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ಕಲಾವಿದರಿಗೆ ಆಗುತ್ತಿದ್ದ ಅನ್ಯಾಯ ಮತ್ತು ನಿರ್ಲಕ್ಷಿಸುತ್ತಿದ್ದ ರೀತಿಯನ್ನು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಾ ಕಲಾವಿದರಿಗೆ ಸಿಗಬೇಕಾದ ಸೌಕರ್ಯಗಳು ಸಿಗುವಂತೆ ಪ್ರಯತ್ನಿಸುವ ಮೂಲಕ ನಾಡಿನ ಜನಪದ ಕಲಾವಿದರಿಗೆ ಆತ್ಮವಿಶ್ವಾಸ ತಂದುಕೊಟ್ಟ ಧೀಮಂತ ವ್ಯಕ್ತಿ ಡಾ.ಎಚ್.ಎಲ್.ನಾಗೇಗೌಡರು ಎಂದರು.

ರಾಮನಗರದ ಜಾನಪದ ಲೋಕದಲ್ಲಿ 1600 ಗಂಟೆ ಕಾಲ ಕೇಳುವಷ್ಟು ಜನಪದ ಹಾಡುಗಳ ಸಂಗ್ರಹವಿದೆ. ಮರೆತು ಹೋಗುತ್ತಿದ್ದ ಅದೆಷ್ಟೋ ಜಾನಪದ ಹಾಡಿನ ಧಾಟಿಗಳನ್ನು ಇಂದಿಗೂ ಕೂಡ ಅಲ್ಲಿ ನೋಡಬಹು. 300 ಗಂಟೆ ಕಾಲ ನೋಡುವಷ್ಟು ವೀಡಿಯೋ ಕೂಡ ನಮ್ಮಲ್ಲಿದೆ. ನಶಿಸಿ ಹೋಗುತ್ತಿರುವ ಅದೆಷ್ಟೋ ಕಲೆಗಳನ್ನು ನಾಗೇಗೌಡರು ಜಾನಪದ ಲೋಕದಲ್ಲಿಟ್ಟಿದ್ದಾರೆ. ಯಾರು ಬೇಕಾದರೂ ಅಂತಹ ಕಲೆಗಳನ್ನು ನೋಡಿ ಕಲಿಯಬಹುದಾಗಿದೆ ಎಂದರು.