ಜನರ ಬದುಕಿನಿಂದ ಹುಟ್ಟಿ ಬೆಳೆದ ಜಾನಪದ ಸಾಹಿತ್ಯವು ಜನರಿಂದ ಜನರಿಗಾಗಿ ತಲೆಮಾರಿನಿಂದ ತಲೆಮಾರಿಗೆ ಪ್ರವಹಿಸಿ ಇಂದಿಗೂ ಜೀವಂತವಾಗಿದೆ.

ಧಾರವಾಡ:

ನಮ್ಮ ನೆಲದ ಬದುಕಿನ ಜೀವನಾನುಭವದ ಜ್ಞಾನ, ನಂಬಿಕೆ, ಕಲಾಪರಂಪರೆಯ ಜತೆಗೆ ಜನರ ಸಂಸ್ಕೃತಿ ಮೌಲ್ಯಗಳ ಅಭಿವ್ಯಕ್ತಿಯೇ ಜಾನಪದ ಎಂದು ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಹೇಳಿದರು.

ತಾಲೂಕಿನ ಕೊಟಬಾಗಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಡಾ. ಎಸ್.ಎಸ್. ಜೀವಣ್ಣವರ ಎಜ್ಯೂಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಉದ್ಘಾಟಿಸಿದ ಅವರು, ಜನರ ಬದುಕಿನಿಂದ ಹುಟ್ಟಿ ಬೆಳೆದ ಜಾನಪದ ಸಾಹಿತ್ಯವು ಜನರಿಂದ ಜನರಿಗಾಗಿ ತಲೆಮಾರಿನಿಂದ ತಲೆಮಾರಿಗೆ ಪ್ರವಹಿಸಿ ಇಂದಿಗೂ ಜೀವಂತವಾಗಿದೆ. ಭಾರತೀಯ ಸಂಸ್ಕೃತಿಯ ಅನೇಕ ಹಬ್ಬ-ಹರಿದಿನಗಳ ಆಚರಣೆಗಳ ಪರಂಪರೆಯಲ್ಲಿಯೂ ಜಾನಪದವು ಇಂದಿಗೂ ಹಸಿರಾಗಿದೆ ಎಂದರು.

ಪಾಲಿ ಭಾಷಾ ವಿದ್ವಾಂಸ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ ಮಾತನಾಡಿ, ಕ್ರಿಸ್ತ ಪೂರ್ವದಿಂದಲೂ ಭಾರತೀಯ ಸಂಸ್ಕೃತಿಯ ಶೀಲತತ್ವ ನೀತಿಯ ಮೌಲ್ಯಗಳನ್ನು ಮೂಲ ನೆಲೆಯಲ್ಲಿ ಉಳಿಸಿ-ಬೆಳೆಸಿರುವುದು ಜಾನಪದವೇ ಆಗಿದೆ. ಇದು ಮಾನವನ ಅಂತರಂಗ-ಬಹಿರಂಗಗಳ ತೌಲನಿಕ ದರ್ಶನವಾಗಿಯೂ ಗಮನ ಸೆಳೆಯುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕ, ನಿವೃತ್ತ ಶಿಕ್ಷಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಜನರ ಬದುಕಿನ ವಿಭಿನ್ನ ವಿದ್ಯಮಾನಗಳ ಸಮಷ್ಟಿ ಪ್ರಜ್ಞೆಯನ್ನೇ ಕೇಂದ್ರೀಕರಿಸಿರುವ ಜಾನಪದವು ನಮ್ಮ ನೆಲದ ಮೂಲ ತತ್ವಗಳ ನೆಲೆಯಲ್ಲಿ ಹುಟ್ಟಿಕೊಂಡಿರುವ ವಿಭಿನ್ನ ಕಲಾಪ್ರಕಾರಗಳಲ್ಲಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರು.

ಕೊಟಬಾಗಿಯ ಗ್ರಾಪಂ ಮಾಜಿ ಅಧ್ಯಕ್ಷ ಮಹಾಂತಯ್ಯ ಹಿರೇಮಠ, ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ದೇವೇಂದ್ರಪ್ಪ ಜಿನ್ನಪ್ಪನವರ, ಮುತ್ತಯ್ಯ ಹಿರೇಮಠ, ಪಿಡಿಒ ಶಶಿರೇಖಾ ಚಕ್ರಸಾಲಿ, ಮುಖ್ಯಾಧ್ಯಾಪಕ ರಾಜಗುರು ತಳವಾರ, ಮಹಾವೀರ ಅಣ್ಣಿಗೇರಿ, ಶಿವಾನಂದ ಅಮರಶೆಟ್ಟಿ ಪಾಲ್ಗೊಂಡಿದ್ದರು.

ಇದೇ ವೇಳೆ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ, ಸವಿತಾ ಅಮರಶೆಟ್ಟಿ, ಗುರುಮೂರ್ತಿ ಯರಗಂಬಳಿಮಠ, ಪ್ರಭಾಕರ ದೇಶಪಾಂಡೆ, ಶಿವಾನಂದ ಅಮರಶೆಟ್ಟಿ, ಶಶಿರೇಖಾ ಚಕ್ರಸಾಲಿ, ಶ್ರೀಶೈಲಗೌಡ ಕಮತರ, ಅಶ್ವಿನ ಭೂಸಾರೆ ಅವರಿಗೆ ‘ಶ್ರೀಜೀವಮಾನ ಸಾಧನಾಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಡಾ. ಎಸ್.ಎಸ್. ಜೀವಣ್ಣವರ ಎಜ್ಯೂಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರವೀಣ ಜೀವಣ್ಣವರ ಸ್ವಾಗತಿಸಿದರು. ಶಿಕ್ಷಕ ಬಸನಗೌಡ ಗೌಡಣ್ಣವರ ವಂದಿಸಿದರು.