ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ: ಎಸ್.ಆರ್. ಪಾಟೀಲ

| Published : May 21 2025, 12:00 AM IST

ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ: ಎಸ್.ಆರ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮತ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು ತನ್ನದೇಯಾದ ಬಹುದೊಡ್ಡ ಕೊಡುಗೆಯನ್ನು ನಾಡಿಗೆ ನೀಡುತ್ತಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮತ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು ತನ್ನದೇಯಾದ ಬಹುದೊಡ್ಡ ಕೊಡುಗೆಯನ್ನು ನಾಡಿಗೆ ನೀಡುತ್ತಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ತಾಲೂಕಿನ ಅನಗವಾಡಿ ಗ್ರಾಮದ ಬಸವೇಶ್ವರ ಬಯಲು ರಂಗ ಮಂದಿರದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ಬೀಳಗಿ ಹಾಗೂ ಅನಗವಾಡಿ ಗ್ರಾಮ ವ್ಯಾಪ್ತಿಯ ಬರುವ ಎಲ್ಲ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಈ ನೆಲದ ಮೂಲ ಸಂಸ್ಕೃತಿ, ಮಾನವ ಜನಾಂಗದ ಹುಟ್ಟಿನೊಂದಿಗೆ ಹುಟ್ಟಿ ಬಂದ ಅಪರಿಮಿತ ಜ್ಞಾನವೇ ಜಾನಪದ. ತಲೆತಲಾಂತರದಿಂದಲೂ ಮೌಖಿಕ ಪರಂಪರೆಯಾಗಿ ಉಳಿದು ಬಂದಿರುವ ಶ್ರೇಷ್ಠ ಜ್ಞಾನವೇ ಜಾನಪದವಾಗಿದೆ. ಜಾನಪದ ಉಳಿಸಿ ಬೆಳಿಸುವಲ್ಲಿ ಯುವಕರು ಮುಂದಾಗಬೇಕಿದೆ, ಯುವಕರನ್ನು ಜಾನಪದದತ್ತ ಕರೆತರುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.

ಸಾಹಿತ್ಯ ಕ್ಷೇತ್ರದಲ್ಲಿನ ಕವಿಗಳು, ಬರಹಗಾರರು ಮನಸು ಮಾಡಿದರೆ ಹಲವಾರು ಸಮಸ್ಯೆಗಳಿಗೆ ಉತ್ತರ ಸಿಗಲಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ರಾಜ್ಯದ ಆದಾಯ ಹೆಚ್ಚಿಸುವಲ್ಲಿ ಸಂತ್ರಸ್ತರ ತ್ಯಾಗ ಮತ್ತು ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿದ್ದು ಸರ್ಕಾರಕ್ಕೆ ಎಚ್ಚರಿಕೆ ಗಂಟೆ ನೀಡುವ ನಿಟ್ಟಿನಲ್ಲಿ ಜಾನಪದ ಪರಿಷತ್‌ ಹಾಗೂ ಸಾಹಿತ್ಯ ಪರಿಷತ್ ಇನ್ನೂ ಅನೇಕ ಸಂಘಟನೆಗಳು ಸಂತ್ರಸ್ತರ, ರೈತಾಪಿ ಜನರ ಬದುಕಿಗೆ ನೀರಾವರಿ ಸೌಲಭ್ಯಕ್ಕಾಗಿ ಹೋರಾಟ ಮಾಡುವುದಲ್ಲದೆ, ಹರಿತವಾದ ಸಾಹಿತ್ಯ ಲೇಖನದಿಂದ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಜಾನಪದ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ಉಳಿವಿಗೆ ಸರ್ಕಾರ ಮುಂದಾಗುತ್ತಿಲ್ಲ. ಕಲಾವಿದರಿಗೆ ಸರಿಯಾದ ರೀತಿಯಲ್ಲಿ ಗೌರವ ಸಿಗುತ್ತಿಲ್ಲ. ವಯೋಮಿತಿ 50 ವರ್ಷ ಮಾಡಿದರೆ ಮಾತ್ರ ಹಿರಿಯ ಕಲಾವಿದರಿಗೆ ಅನುಕೂಲವಾಗಲಿದೆ. ಬೇರೆ ರಾಜ್ಯದಲ್ಲಿ ಕಲಾವಿದರಿಗೆ ₹10 ಸಾವಿರ ಪಿಂಚಣಿ ದೊರೆಯುತ್ತಿದೆ. ಇಲ್ಲಿ ಕೇವಲ ₹2 ಸಾವಿರ ಕೊಡುತ್ತಾರೆ. ಕನಿಷ್ಠ ₹5 ಸಾವಿರ ಪಿಂಚಣಿ ಮಾಡಬೇಕು. ಕಲಾವಿದರು ಮರಣ ಹೊಂದಿದಲ್ಲಿ ಅವರಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಧನ ಸಹಾಯ ಮಾಡಬೇಕು. ಇದು ಯಾವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ಸರ್ಕಾರ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಜಿಲ್ಲಾಮಟ್ಟದ ದ್ವಿತೀಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿದ್ದು ಇಲ್ಲಿಯ ಜನರ ಪ್ರೀತಿ ವಿಶ್ವಾಸ ಇದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನ ಸರ್ವಾಧ್ಯಕ್ಷರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜಾನಪದ ಆಶುಕವಿ ಸಿದ್ದಪ್ಪ ಸಾಬಣ್ಣ ಬಿದರಿ ಮಾತನಾಡಿ, ಜಾನಪದ ಉಳಿವಿಗೆ ಪ್ರತಿಯೊಂದು ಮನೆ ಹಾಗೂ ಮನದಲ್ಲಿ ಸಾಹಿತ್ಯದ ಅರಿವು ಮೂಡಬೇಕಿದೆ. ಹಿಂದೆ ಜಾನಪದಕ್ಕೆ ಹೆಚ್ಚಿನ ಮಹತ್ವ ಇತ್ತು. ಆದರೆ ಇಂದು ಬೇರೆ ಬೇರೆ ಆಚಾರ-ವಿಚಾರಗಳಿಗೆ ಯುವ ಜನತೆ ಮಾರುಹೋಗಿ ನಶಿಸಿ ಹೋಗುವ ಸ್ಥಿತಿಯಲ್ಲಿ ಜಾನಪದವಿದ್ದು, ಅದನ್ನು ಉಳಿಸಿ, ಬೆಳೆಸುವಲ್ಲಿ ಜಾನಪದ ಪರಿಷತ್ ತಾಯಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೆಣ್ಣು ಹೆತ್ತ ತಂದೆ-ತಾಯಿಗಳು ರೈತರ ಮಕ್ಕಳಿಗೆ ಹೆಣ್ಣು ಕೊಡಬೇಕು. ನೌಕರಿ ಇದ್ದವರಿಗೆ ಹೆಣ್ಣು ಕೊಡುವುದಾಗಿ ಹೇಳುವುದು ಸರಿಯಲ್ಲ. ಎಲ್ಲರಿಗೂ ನೌಕರಿ ಸಿಗುವುದು ಕಷ್ಟದ ಕೆಲಸ. ನಮ್ಮೆಲ್ಲರಿಗೆ ಅನ್ನ ಹಾಕುವ ರೈತರ ಮಕ್ಕಳು ದೇಶದ ಸೈನಿಕರಂತೆ ಎಂದ ಅವರು, ಜಾನಪದ ಗೀ ಗೀ ಪದ, ಡೊಳ್ಳಿನ ಪದ ಹಾಡಿ ರಂಜಿಸಿದರು.

ಉದ್ಯಮಿ ಲಕ್ಷ್ಮಣ ಆರ್.ನಿರಾಣಿ ಮಾತನಾಡಿದರು. ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಮ್ಮೇಳನಾಧ್ಯಕ್ಷ ಸಿದ್ದಪ್ಪ ಬಿದರಿ ಅವರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಆರತಿ, ಕುಂಭಮೇಳ ಹಾಗೂ ವಿವಿಧ ಕಲಾ ತಂಡದ ಕಲಾವಿದರಿಗೆ ನಡೆಯಿತು.

ಅನಗವಾಡಿಯ ಪೂರ್ಣಾನಂದಾಶ್ರಮದ ಅನಸೂಯಾ ತಾಯಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ಎಸ್. ಕೌಜಲಗಿ, ಸುರೇಶ ವಸ್ತ್ರದ, ಜಿಲ್ಲಾ ಘಟಕ ಕಾರ್ಯದರ್ಶಿ ಆರ್.ಬಿ. ನಬಿವಾಲೆ, ಅನಗವಾಡಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಯ್ಯ ಕಂಬಿ, ಡಾ.ರಮೇಶ ಅಕ್ಕಿಮರಡಿ, ವಕೀಲ ಅಶೋಕ ಬಿ.ನಾಯಕ, ಗ್ರಾಪಂ ಅಧ್ಯಕ್ಷೆ ಹುಚ್ಚವ್ವ ಮಾದರ, ಮಲ್ಲಪ್ಪ ಮೇಟಿ, ತಾಂಬೋಳಿ, ಶೇಖರ ಗೊಳಸಂಗಿ, ಶಿವಾನಂದ ಹಿರೇಮಠ ಸೇರಿದಂತೆ ಇತರರು ಇದ್ದರು.