ಜನಪದ ಜನರ ಬದುಕಿನ ದಿಕ್ಸೂಚಿ

| Published : Feb 13 2025, 12:47 AM IST

ಸಾರಾಂಶ

ಆಧುನಿಕತೆಯ ನಾಗಾಲೋಟದ ಪ್ರಭಾವದಿಂದ ನಮ್ಮ ಬದುಕಿನ ರೀತಿ ರಿವಾಜು ಬದಲಾಗಿರಬಹುದು

ಗದಗ: ಜನಪದ ಜನರ ಬದುಕಿನ ದಿಕ್ಸೂಚಿಯಾಗಿದೆ, ಅದರ ಉಳಿವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ, ಸಾಂಸ್ಕೃಿತಿಕ ಚಿಂತಕ ಡಾ. ಜಿ.ಬಿ.ಪಾಟೀಲ ಹೇಳಿದರು.

ಅವರು ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಾಗಾವಿ ರಸ್ತೆಯ ಕ.ರಾ. ಗ್ರಾ.ಪಂ.ರಾ. ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಆವರಣದ ಕೌಶಲ್ಯ ಭವನದಲ್ಲಿ ಲಾವಣಿ ಹಾಗೂ ಗೀಗೀ ಪದ ತರಬೇತಿ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆಯ ನಾಗಾಲೋಟದ ಪ್ರಭಾವದಿಂದ ನಮ್ಮ ಬದುಕಿನ ರೀತಿ ರಿವಾಜು ಬದಲಾಗಿರಬಹುದು. ಬದಲಾವಣೆ ಜಗದ ನಿಯಮ, ನಾವು ಕಾಲ ಮತ್ತು ಸಮಯಕ್ಕೆ ತಕ್ಕ ಹಾಗೆ ಬದಲಾಗಬೇಕಾದುದು ಅನಿವಾರ್ಯ, ನಮ್ಮ ಸಂಸ್ಕೃತಿ ಪರಂಪರೆಯೊಂದಿಗೆ ಬೆಳೆದು ಬಂದ ಕಲಾ ಪ್ರಕಾರ ಕೂಡಾ ಅನೇಕ ರೀತಿ ಬದಲಾವಣೆಗೆ ಒಗ್ಗಿಕೊಂಡಿವೆ. ನಮ್ಮ ಗ್ರಾಮೀಣ ಜನಪದ ಕಲೆಗಳು ಕೂಡಾ ಹೊಸತನಕ್ಕೆ ತಕ್ಕಂತೆ ಬದಲಾಗಿವೆ, ಬದಲಾಗುತ್ತಿವೆ. ಬದುಕಿನಲ್ಲಿ ಹಾಸು ಹೊಕ್ಕಾಗಿದ್ದ ಕಲೆಗಳು ಇಂದು ವೇದಿಕೆಯ ಪ್ರದರ್ಶನ ಕೆಲಗಳಾಗಿ ಮಾರ್ಪಾಡಾಗಿವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ವಿವಿ ವಿಶೇಷ ಕರ್ತವ್ಯಾಧಿಕಾರಿ ಉಮೇಶ ಬಾರಕೇರ ಮಾತನಾಡಿ, ಜನಪದ ಕಲಾ ಪ್ರಾಕಾರಗಳಾದ ಲಾವಣಿ ಹಾಗೂ ಗೀಗೀ ಪದ ತರಬೇತಿ ಶಿಬಿರ ವಿವಿಯಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸದಸ್ಯರು ಹಾಗೂ ಹಿರಿಯ ಕಲಾವಿದ ಶಂಕರಣ್ಣ ರಾಮಪ್ಪ ಸಂಕಣ್ಣವರ ಮಾತನಾಡಿ, ನನ್ನ ಅನೇಕ ದಿನಗಳ ಕನಸು ಲಾವಣಿ ಹಾಗೂ ಗೀಗೀ ಪದಗಳ ತರಬೇತಿ ಶಿಬಿರ ಅಯೋಜಿಸುವುದಾಗಿತ್ತು, ಅದು ಇಂದು ಸಾಕಾರಗೊಂಡಿದೆ ಎಂದರು.

ವಿವಿ ಸಾಮಾಜಿಕ ಸಾಂಸ್ಕೃತಿಕ ಸಂಯೋಜಕ ಚಂದ್ರಪ್ಪ ಬಾರಂಗಿ, ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿರುಪಾಕ್ಷಪ್ಪ ಗೂರನವರ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಬಸಪ್ಪ ನೀಲಪ್ಪ ಹಡಗಲಿ, ವೀರಣ್ಣ ಚನ್ನಪ್ಪ ಅಂಗಡಿ, ನಿಂಗಪ್ಪ ದಿಂಡೂರ, ಸಾವಿತ್ರಿಬಾಯಿ ಪೂಜಾರ ಉಪಸ್ಥಿತರಿದ್ದರು.

ಶ್ರೇಯಾಂಕ, ಸಂಜನಾ ಪ್ರಾರ್ಥಿಸಿದರು. ಶ್ವೇತಾ ಎಸ್.ಎಂ.ನಿರೂಪಿಸಿದರು. ರಂಗಕರ್ಮಿ ಮೌನೇಶ ಸಿ.ಬಡಿಗೇರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಕಲಾವಿದ ಬಸವರಾಜ ಈರಣ್ಣವರ ವಂದಿಸಿದರು.