11,12ರಂದು ಜನಪದ ಗೀತ ಮಂದಾರ ಗಾಯನ ಶಿಬಿರ

| Published : Feb 06 2025, 11:45 PM IST

ಸಾರಾಂಶ

ಕಡೂರು, ಫೆಬ್ರವರಿ 11 ಮತ್ತು 12 ರಂದು ಕಡೂರು ಪಟ್ಟಣದಲ್ಲಿ ಜನಪದ ಗೀತ ಮಂದಾರ ಗಾಯನ ಶಿಬಿರ ನಡೆಯಲಿದೆ ಎಂದು ಚಿಕ್ಕಮಗಳೂರಿನ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟಿನ ಮುಖ್ಯ ಸಂಚಾಲಕ ಮಲ್ಲಿಗೆ ಸುಧೀರ್ ತಿಳಿಸಿದರು.

ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲ್ಲಿಗೆ ಸುಧೀರ್ ಮಾಹಿತಿ

ಕನ್ನಡ ಪ್ರಭ ವಾರ್ತೆ, ಕಡೂರು

ಫೆಬ್ರವರಿ 11 ಮತ್ತು 12 ರಂದು ಕಡೂರು ಪಟ್ಟಣದಲ್ಲಿ ಜನಪದ ಗೀತ ಮಂದಾರ ಗಾಯನ ಶಿಬಿರ ನಡೆಯಲಿದೆ ಎಂದು ಚಿಕ್ಕಮಗಳೂರಿನ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟಿನ ಮುಖ್ಯ ಸಂಚಾಲಕ ಮಲ್ಲಿಗೆ ಸುಧೀರ್ ತಿಳಿಸಿದರು.

ಗುರುವಾರ ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಧುನಿಕತೆ ಸೊಗಡಿನಿಂದಾಗಿ ನಮ್ಮ ಜನಪದ ಸಂಸ್ಕೃತಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಜನಪದ ಗೀತೆಗಳು, ಜನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸುವ ದೃಷ್ಟಿಯಲ್ಲಿ ಶಿಕ್ಷಕರು,ಮಕ್ಕಳು ಹಾಗೂ ಸಾರ್ವಜನಿಕರಿಗೆ ತರಬೇತಿ ನೀಡುವ ಪ್ರಮುಖ ಉದ್ದೇಶ ಇದಾಗಿದೆ. ಫೆ. 11ರ ಬೆಳಿಗ್ಗೆ ಕಡೂರು ಪಟ್ಟಣದ ಯು.ಬಿ. ರಸ್ತೆಯಲ್ಲಿರುವ ಟಿಎಸ್ಎಸ್ ಸೆಂಚುರಿಯನ್ ಪಾರ್ಟಿ ಹಾಲಿನಲ್ಲಿ 2 ದಿನಗಳ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕ ಅಪ್ಪುಗೆರೆ ತಿಮ್ಮರಾಜು ಶಿಬಿರದಲ್ಲಿ ಜಾನಪದ ಸಂಸ್ಕೃತಿಯ ಪರಿಚಯ ಮಾಡಿಸಿ, ತರಬೇತಿ ನೀಡಲಿದ್ದಾರೆ ಎಂದರು.

ಮುಂದಿನ ಪೀಳಿಗೆಗೆ ಜನಪದ ಗೀತೆ ಮತ್ತು ಸಾಹಿತ್ಯವನ್ನು ವರ್ಗಾಯಿಸಲು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುತ್ತಿರುವ ಶಿಕ್ಷಕರು,ವಿದ್ಯಾರ್ಥಿಗಳಿಗೆ ಜನಪದ ಗಾಯನ ತರಬೇತಿ ನೀಡಲಾಗುವುದು. ಜಾನಪದ ಗೀತೆಗಳ ಸಂದೇಶ ಮತ್ತು ನೀತಿಯನ್ನುತರಬೇತಿ ನೀಡಿದಲ್ಲಿ ನಮ್ಮ ಸಂಸ್ಕೃತಿ ಉಳಿಸುವ ಮತ್ತು ಮುಂದಿನ ಪೀಳಿಗೆಗೆ ನೀಡುವ ಕೆಲಸ ಮಾಡಿದಂತಾಗುತ್ತದೆ. ಈ ಉದ್ದೇಶದಿಂದ ಶಿಕ್ಷಣ ಇಲಾಖೆ ಮತ್ತು ಚಿಕ್ಕಮಗಳೂರಿನ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ , ಬೀರೂರಿನ ಮಲ್ಲಿಗೆ ಬಳಗದ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. ಎರಡು ದಿನಗಳ ಈ ಶಿಬಿರದ ಸಿದ್ಧತೆ ನಡೆಯುತ್ತಿದ್ದು ಮುಂದೆ ತಾಲೂಕು ಕೇಂದ್ರಗಳಲ್ಲೂ ಆಯೋಜಿಸಲಾಗುವುದು.

ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಮಕ್ಕಳು ಮತ್ತು ಸಾರ್ವಜನಿಕರು ಕೂಡ ಪ್ರವೇಶ ಪಡೆದು ತರಗತಿಗೆ ಹಾಜರಾಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್.ಆನಂದ್ ವಹಿಸಲಿದ್ದು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಕಾರ್ಯಕ್ರಮ ಉದ್ಘಾಟಿಸುವರು. ಅನೇಕ ಗಣ್ಯರು, ಕಲಾವಿದರು, ಅಧಿಕಾರಿಗಳು ಗಣ್ಯರು ಆಗಮಿಸಲಿದ್ದಾರೆ ಬರುವ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಸುಧೀರ್ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರ ಮಾದರಿ ಶಾಲೆ ಮುಖ್ಯ ಶಿಕ್ಷಕಿ ರುಕ್ಮಿಣಿ, ಶಿಕ್ಷಕಿ ಶೋಭಾ, ಟ್ರಸ್ಟಿನ ಸಹ ಸಂಚಾಲಕರಾದ ಮಂಜುಳಾ ಮಹೇಶ್ ಮತ್ತಿತರರು ಇದ್ದರು. 6ಕೆಕೆಡಿಯು1.ಮಲ್ಲಿಗೆ ಸುಗಮ ಸಂಗೀತ ಟ್ರಸ್ಟಿನ ಸಂಚಾಲಕ ಮಲ್ಲಿಗೆ ಸುಧೀರ್ ಸುದ್ದಿಗೋಷ್ಠಿ ನಡೆಸಿದರು.