ಕನ್ನಡಪ್ರಭ ವಾರ್ತೆ ತರೀಕೆರೆ
ಜನಪದರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಬೆಳೆದವರು, ಪ್ರೀತಿಯಿಂದ ಬೆಳೆಸಿದ ಜನಪದ ಸಂಸ್ಕೃತಿಯನ್ನು ಉಳಿಸಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು.ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು ತರೀಕೆರೆ ತಾಲೂಕು ವತಿಯಿಂದ ಸಮೀಪದ ತ್ಯಾಗದಬಾಗಿ ಗ್ರಾಮದ ಸಮುದಾಯ ಭವನದಲ್ಲಿ ಭಾನುವಾರ ಬೆಂಗಳೂರು ಕ.ಜಾ.ಪ.ಸಂಸ್ಥಾಪಕರು ನಾಡೋಜ ಡಾ.ಎಚ್.ಎಲ್.ನಾಗೇಗೌಡ, ತ್ಯಾಗದಬಾಗಿ ಜನಪದ ಕಲಾವಿದರು ದಿ.ಶ್ರೀಮತಿ ದಾಕ್ಷಾಯಣಮ್ಮ ಸ್ಮರಣಾರ್ಥ ಏರ್ಪಾಡಾಗಿದ್ದ ಜಾನಪದ ಕಲೋತ್ಸವ, ಜನಪದ ಕಲಾ ಸಾಧಕರು ಮತ್ತು ಕಲಾ ಪೋಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಲೆಮಾರಿನಿಂದ ತಲೆಮಾರಿನವರಿಗೆ ಜನಪದವನ್ನು ಉಳಿಸಿಕೊಂಡು ಬರಲಾಗಿದೆ, ಯುವಕರನ್ನು ಒಗ್ಗೂಡಿಸಬೇಕು, ಜನಪದವನ್ನು ಕಟ್ಟಬೇಕು, ಪ್ರಥಮ ಜನಪದ ಸಮ್ಮೇಳನ ನೆಡೆದ ಸ್ಥಳ ತರೀಕೆರೆ, ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲು ಸಂತೋಷವಾಗುತ್ತದೆ ಎಂದು ತಿಳಿಸಿದ ಅವರು ಸುಶ್ರಾವ್ಯವಾಗಿ ಜನಪದ ಗೀತೆಗಳನ್ನು ಹಾಡಿದರು.ಚಿಕ್ಕಮಗಳೂರು ಜಿಲ್ಲೆ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಜಿ.ಬಿ.ಸುರೇಶ್ ಅವರು ಮಾತನಾಡಿ ಜಾನಪದವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ, ಜಾನಪದದಲ್ಲಿ 250ಕ್ಕೂ ಹೆಚ್ಚು ಕಲಾ ಪ್ರಕಾರಗಳು ಇದೆ, ಎಲ್ಲ ಹಾಡುಗಳಿಗೆ ಮೂಲ ಜಾನಪದವಾಗಿದೆ, ಜಾನಪದ ಕಲೆಯನ್ನು ಮರೆಯಬಾರದು, ನಾಡು ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಸಾಹಿತಿ ಇಮ್ರಾನ್ ಅಹಮದ್ ಬೇಗ್ ಅವರು ಆಶಯ ನುಡಿ ಮಾತನಾಡಿ ಜಾನಪದ ಕಲೆ ವಿಶಾಲವಾದ ವೈಶಿಷ್ಟ್ಯತೆಯಿಂದ ಕೂಡಿರುತ್ತದೆ, ಪರಂಪರಾನುಗತವಾಗಿ ಜ್ಞಾನ ನೀಡಿದೆ ಜಾನಪದ, ಭಾವದಿಂದ ಭಕ್ತಿ ತೋರಿಸುವುದು ಜಾನಪದ, ತಾಯಿಯ ಋಣ ತೀರಿಸಬೇಕು, ತ್ರಿಪದಿಯ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಡಬೇಕು, ಹಿರಿಯರ ಮಾತು ಅಲಿಸಿ ಪಾಲಿಸಿ ಮುಂದಿನ ಪೀಳಿಗೆಗೆ ಸಾಗಿಸಿ ಪ್ರಕೃತಿಯ ಋಃಣವನ್ನು ತೀರಿಸಬೇಕು ಎಂದು ಹೇಳಿದರು.
ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ, ಜಾನಪದ ಕಲೋತ್ಸವ ವಿಶೇಷವಾದ ಕಾರ್ಯಕ್ರಮವಾಗಿದೆ, ಭಾವೈಕ್ಯತೆ ಮತ್ತು ಸಹೃದಯತೆಯನ್ನು ಬಿಂಬಿಸಿದೆ, ಸಂಘಟನೆ ಮತ್ತು ಸಮುದಾಯದಲ್ಲಿ ನಾವೆಲ್ಲರೂ ಒಗ್ಗೂಡಬೇಕು, ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಹಳ್ಳಿ ಹಳ್ಳಿಗೂ ತಲುಪಬೇಕು ಎಂದು ಹೇಳಿದರು.
ಕಡೂರು ಸಾಹಿತಿ ಹೊಸೂರು ಪುಟ್ಟರಾಜು ಅವರು ಮಾತನಾಡಿ ಜನಪದ ಸಂಸ್ಕೃತಿ ಶ್ರೀಮಂತ ಮತ್ತು ಜೀವಂತ, ಭಾರತೀಯ ಸಂಸ್ಕೃತಿಯ ಮೂಲ ಅಡಿಪಾಯ ಜಾನಪದವಾಗಿದೆ ಎಂದು ಹೇಳಿದರು.ಸಮಾಜ ಸೇವಕರು ಶ್ಯಾಮಲ ಮಂಜುನಾಥ್ ಮಾತನಾಡಿ, ಕಲೆಯನ್ನು ಪ್ರೋತ್ಸಾಹಿಸಬೇಕು, ಜನಪದ ಕಾರ್ಯಕ್ರಮ ಯುವಕರಿಗೆ ತಲುಪುವಂತಾಗಬೇಕು ಎಂದು ಹೇಳಿದರು. ಕ.ಜಾ.ಪ.ತರೀಕೆರೆ ತಾಲೂಕು ಅಧ್ಯಕ್ಷರು ಆರ್.ನಾಗೇಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಡಗನಾಡು ಶ್ರೀ ಹೇಮರೆಡ್ಡಿ ಮಲ್ಲಮ್ಮ, ವೀರಶೈವ ಜನಾಂಗ ಸಂಘ ಅಧ್ಯಕ್ಷರು ರೇವಣಸಿದ್ದಪ್ಪ ಮಾತನಾಡಿದರು.
ಕೆ.ಎಸ್.ಶಿವಣ್ಣ,ನಾಗೇನಹಳ್ಳಿ ತಿಮ್ಮಯ್ಯ ಕ.ಜಾ.ಪ.ಸಂಚಾಲಕರಾದ ಗಾಯಿತ್ರಮ್ಮ, ಮುಖಂಡರಾದ ಮಹಲಿಂಗಪ್ಪ, ಮುರುಗೇಶ್, ನಾಗೇಂದ್ರಪ್ಪ, ಶಂಕರಪ್ಪ, ದೇವರಾಜು, ಗಿರೀಶ್, ಸೈಯದ್ ಮುಹೀಬುಲ್ಲ, ಜಿ.ಬಿ.ಹೇಮಂತಕುಮಾರ್, ತ್ಯಾಗದಬಾಗಿ ದೇವರಾಜು, ಅನಿಲ್, ಗ್ರಾಮಸ್ಥರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಜನಪದ ಕಲಾ ಸಾಧಕರಿಗೆ ಮತ್ತು ಕಲಾ ಫೋಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.