ಜೀವನಪ್ರೀತಿ ತುಂಬುವ ಶಕ್ತಿ ಜಾನಪದಕ್ಕಿದೆ: ಶಿವಪ್ರಸಾದ್

| Published : Sep 18 2024, 01:58 AM IST

ಸಾರಾಂಶ

ನಮ್ಮ ಮಕ್ಕಳಿಗೆ ಸಿನಿಮಾ, ಟಿ.ವಿ. ಮತ್ತು ಮೊಬೈಲ್ ಮಾಯಾಲೋಕದಲ್ಲಿ ತೇಲಿಸುವುದನ್ನು ಬಿಟ್ಟು ಜಾನಪದ ಸಂಸ್ಕೃತಿಯಿಂದ ನಮ್ಮ ಪರಂಪರೆಯನ್ನು ಪರಿಚಯಿಸಿ ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಬೇಕು. ಮಾಯಾ ಲೋಕವನ್ನು ಅಪ್ಪಿಕೊಳ್ಳುತ್ತಾ, ನಮ್ಮದಲ್ಲದ ಲೋಕವನ್ನು ಬೆಳೆಸುವ ಅಪಾಯದ ಪ್ರಯತ್ನಗಳು ನಡೆಯುತ್ತಿರುವ ದಿನಗಳಲ್ಲಿ ಜಾನಪದ ಸಂಸ್ಕೃತಿಯ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಜೀವನ ಪ್ರೀತಿಯನ್ನು ತುಂಬುವ, ಸಂಬಂಧಗಳನ್ನು ಕಟ್ಟಿಕೊಡುವ ಮತ್ತು ಸಮಾಜವನ್ನು ಒಗ್ಗೂಡಿಸುವ ಕಲಾ ಶಕ್ತಿ ಜಾನಪದಕ್ಕೆ ಇದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಜನಕಲಾರಂಗ, ಜಿಲ್ಲಾ ಕಲಾವಿದರ ಬಳಗ ಮತ್ತು ಜನಪರ ಸಂಘಟನೆಗಳ ಸಂಯುಕ್ತವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಮ್ಮ ಮಕ್ಕಳಿಗೆ ಸಿನಿಮಾ, ಟಿ.ವಿ. ಮತ್ತು ಮೊಬೈಲ್ ಮಾಯಾಲೋಕದಲ್ಲಿ ತೇಲಿಸುವುದನ್ನು ಬಿಟ್ಟು ಜಾನಪದ ಸಂಸ್ಕೃತಿಯಿಂದ ನಮ್ಮ ಪರಂಪರೆಯನ್ನು ಪರಿಚಯಿಸಿ ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಬೇಕು. ಮಾಯಾ ಲೋಕವನ್ನು ಅಪ್ಪಿಕೊಳ್ಳುತ್ತಾ, ನಮ್ಮದಲ್ಲದ ಲೋಕವನ್ನು ಬೆಳೆಸುವ ಅಪಾಯದ ಪ್ರಯತ್ನಗಳು ನಡೆಯುತ್ತಿರುವ ದಿನಗಳಲ್ಲಿ ಜಾನಪದ ಸಂಸ್ಕೃತಿಯ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.

ನೆಲದ ಸಂಸ್ಕೃತಿ ಉಳಿಸಿಕೊಳ್ಳಿ:

ಸಂತರು, ಶರಣರು, ದಾಸರು ಮತ್ತು ಜಾನಪದೀಯರು ನಮ್ಮ ಮಕ್ಕಳ ಮನಸ್ಸಿನಲ್ಲಿ ಇಲ್ಲ. ಮಹನೀಯರು ಮರು ಪ್ರವೇಶ ಮಾಡದಿದ್ದರೆ ದೇಶಕ್ಕೆ ಉಳಿಗಾಲವೂ ಇಲ್ಲ. ಮಕ್ಕಳಿಗೆ ಊರು, ಕೆರೆ, ತೋಪು, ಹೊಲ, ಗದ್ದೆ, ಜಾತ್ರೆ, ಹಬ್ಬ, ತಾತ, ಅಜ್ಜಿಯ ಪರಿಚಯ ಮಾಡುತ್ತಲೇ ನೆಲದ ಸಂಸ್ಕೃತಿ ಉಳಿಸಿಕೊಂಡು ಭವಿಷ್ಯದ ಪ್ರಜೆಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇವತ್ತಿಗೆ ಜನಪದ ಜನಪರ, ನೆಲದಪರ, ಪ್ರಕೃತಿ ಮತ್ತು ಪರಿಸರ ಪರವಾದ ಮಾತುಗಳನ್ನು ಆಡಿ ಜೀರ್ಣಿಸಿಕೊಳ್ಳದೇ ಕಷ್ಟಕರವಾಗಿದೆ. ಆದರೂ, ಧೃತಿಗೆಡದೆ ನಮ್ಮೊಳಗೆ ಇದಕ್ಕೆ ಪೂರಕವಾದ ವಾತಾವರಣ ಸೃಷ್ಠಿಸಿಕೊಳ್ಳಬೇಕಿದೆ ಎಂದ ಅವರು, ಸರ್ಕಾರ ನೀಡಿರುವ ಪದವಿಯನ್ನು ಜವಾಬ್ದಾರಿಯುತವಾಗಿ ಸದಸ್ಯರ ಬೆಂಬಲದೊಡನೆ ಜನಪದ ನೆಲೆಯಲ್ಲೇ ನಿಭಾಯಿಸುವುದಾಗಿ ಹೇಳಿದರು.

ಸೊರಗಿರುವ ಸಾಮಾಜಿಕ ಚಳವಳಿಗಳು:

ಅಭಿನಂನದನಾ ಭಾಷಣ ಮಾಡಿದ ಸಾಮಾಜಿಕ ಚಿಂತಕ ಇಂದೂಧರ ಹೊನ್ನಾಪುರ, ಸಾಂಸ್ಕೃತಿಕತೆ, ನೈತಿಕತೆ ಮತ್ತು ವೈಜ್ಞಾನಿಕವಾದ ಧಾರ್ಮಿಕತೆ ಇಲ್ಲದೆ, ಇಂದಿನ ಸಾಮಾಜಿಕ ಚಳವಳಿಗಳು ಸೋಲುತ್ತಿವೆ. ಸೊರಗುತ್ತಿವೆ, ಭವಿಷ್ಯದ ದೃಷ್ಠಿಯಿಂದ ದಲಿತ-ರೈತ ಸೇರಿದಂತೆ ವಿವಿಧ ಚಳವಳಿಗಳ ಪುನರುತ್ಥಾನ ಆಗಬೇಕೆಂದು ಆಶಿಸಿದರು.

ದೇಶದಲ್ಲಿನ ಜಾತಿವಾದಿ, ಮತ್ತು ಕೋಮುವಾದಿ ಶಕ್ತಿಗಳು ಸಾಂಸ್ಕೃತಿಕ ಕ್ಷೇತ್ರವನ್ನು ವಿರೂಪಗೊಳಿಸಿ, ಜಾತೀಯತೆ, ಅಸಮಾನತೆ, ಅಸ್ಪಶ್ಯತೆಯನ್ನು ಸೃಷ್ಠಿಸಿ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡುತ್ತಿರುವ ಸಂದರ್ಭದಲ್ಲಿ ಜೀವಪರ ಚಳವಳಿಗಳು ಜಾಗೃತಗೊಳ್ಳಬೇಕು ಎಂದರು.

ಗೊಲ್ಲಹಳ್ಳಿ ಶಿವಪ್ರಸಾದ್ ಬರಹ ಮತ್ತು ಬದುಕು ದಲಿತ ಚಳವಳಿಗೆ ಮಾತ್ರ ಸೀಮಿತವಾದದ್ದು. ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ಎಲ್ಲಾ ಜನಪರ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಅವರ ಜನಪದ ಜನರ ಬದುಕಿನ ಪರವಾಗಿ ಇಂದಿಗೂ ಉಳಿದಿದೆ. ಅವರ ಅನುಭವ ನೋವು-ಸಂಕಟ ಜೀವಪದವಾಗಿದೆ ಎಂದು ಬಣ್ಣಿಸಿದರು.

ಹಿರಿಯ ರೈತ ನಾಯಕಿ ಅನುಸೂಯಮ್ಮ ಸಮಾರಂಭ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಜಿ.ಎಸ್. ಚಂದ್ರಶೇಖರನ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರೈತ ಮುಖಂಡರಾದ ಸುನಂದಾ ಜಯರಾಂ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಜನಕಲಾರಂಗ ಸಂಸ್ಥೆಯ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಮಾತನಾಡಿದರು.

ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಂಜೇಶ್ ಚನ್ನಾಪುರ, ಡಾ. ಕೆಂಪಮ್ಮ ಅವರನ್ನು ಅಭಿನಂದಿಸಲಾಯಿತು. ಗೊಲ್ಲಹಳ್ಳಿ ಶಿವಪ್ರಸಾದ್ ರಚನೆಯ ಗೀತೆಗಳನ್ನು ಹಾಡಲಾಯಿತು.

ಮುಖಂಡರಾದ ಕೆ. ದೇವರಾಜ್ ಕೊಪ್ಪ, ಕೀಲಾರ ಕೃಷ್ಣೇಗೌಡ, ಕಾರಸವಾಡಿ ಮಹದೇವು, ಚಾಮನಹಳ್ಳಿ ಮಂಜು, ಮಂಜುಳಾ ಆಲನಹಳ್ಳಿ, ಗಾಮನಹಳ್ಳಿ ಸ್ವಾಮಿ ಇತರರಿದ್ದರು.