ಮಡಿವಾಳ ಮಾಚಿದೇವ ಜೀವನಾದರ್ಶ ಅನುಸರಿಸಿ

| Published : Feb 02 2025, 01:04 AM IST

ಸಾರಾಂಶ

ಶಿವಮೊಗ್ಗ: ಮಡಿವಾಳ ಮಾಚಿದೇವ 12ನೇ ಶತಮಾನದಲ್ಲಿ ಜಾತಿ ಪದ್ಧತಿಯ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾರ್ಗವನ್ನು ಹಾಕಿಕೊಟ್ಟವರು. ಪ್ರಸ್ತುತ ನಾವೆಲ್ಲರೂ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ: ಮಡಿವಾಳ ಮಾಚಿದೇವ 12ನೇ ಶತಮಾನದಲ್ಲಿ ಜಾತಿ ಪದ್ಧತಿಯ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾರ್ಗವನ್ನು ಹಾಕಿಕೊಟ್ಟವರು. ಪ್ರಸ್ತುತ ನಾವೆಲ್ಲರೂ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಡಿವಾಳ ಮಾಚಿದೇವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸಿಮೀತವಾಗದೆ ಇಡೀ ಮನುಕುಲದ ಒಳಿತಿಗಾಗಿ ದುಡಿದವರು. ಈ ಸಮಾಜಕ್ಕೆ ಯಾವುದು ಬೇಕು, ಬೇಡ ಎಂಬ ಚಿಂತನೆಯಲ್ಲಿ ತೊಡಗಿಕೊಂಡವರು. ಇದಲ್ಲದೆ ಸದಾ ಶೋಷಿತರು, ಅಸ್ಪೃಶ್ಯರು, ಶಿಕ್ಷಣದಿಂದ ವಂಚಿತರಾದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು ಎಂದು ತಿಳಿಸಿದರು.

ಮಾಚಿದೇವ ಅವರು ಕೂಡ ಶಿಕ್ಷಣದಿಂದ ವಂಚಿತರಾದ ಸಮುದಾಯದಿಂದ ಬಂದವರು. ಆದರೆ ಅವರಿಗೆ ಮಲ್ಲಿಕಾರ್ಜುನ ಸ್ವಾಮಿ ಎಂಬ ಗುರು ಶಿಕ್ಷಣ ನೀಡಿದರು. ಅದರಿಂದ ಅವರಿಗೆ 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಲು ಸಾಧ್ಯವಾಯಿತು. ಮಲ್ಲಿಕಾರ್ಜುನ ಸ್ವಾಮಿ ಇಲ್ಲದಿದ್ದರೆ ಮಾಚಿದೇವ ನಂತಹ ದಾರ್ಶನಿಕನನ್ನು ಈ ಸಮಾಜ ನೋಡುತ್ತಿರಲಿಲ್ಲ. ಗುರುಪರಂಪರೆ ಇಲ್ಲದೆ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದರು.ಮಾಚಿದೇವ ಅವರು ವಚನಗಳ ಮೂಲಕ ಪ್ರಕಾಶಮಾನವಾಗಿ ಬೆಳೆದರು. ದೇಹದ ಶುಚಿತ್ವ ಬಗ್ಗೆ ಮಾತ್ರವಲ್ಲದೆ ಮನಸ್ಸಿನ ಶುಚಿತ್ವದ ಬಗ್ಗೆಯೂ ಅರಿವು ಮೂಡಿಸಿದರು. ಮಡಿ ಮೈಲಿಗೆಯ ತಾರತಮ್ಯದ ವಿರುದ್ಧ ಸಂಘಟಿಸಿದರು. ಕಾಯಕ, ಕಾರ್ಯ ಹೀಗೇ ಹತ್ತು ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇವೆಲ್ಲವೂ ಮಾತಿಗೆ ಸೀಮಿತವಾಗದೇ ಅದನ್ನು ಅನುಸರಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಯುವಕರಿಗೆ ಇಂತಹ ಮಹನೀಯರ ಪರಿಚಯವಾಗುವುದು ಇತ್ತೀಚಿನ ವಿದ್ಯಾಮಾನಗಳಲ್ಲಿ ಅಗತ್ಯವಾಗಿದೆ. ಯುವಜನತೆಯನ್ನು ಕೂಡ ಕಾರ್ಯಕ್ರಮದಲ್ಲಿ ಒಳಗೊಳ್ಳುವಂತೆ ಮಾಡಬೇಕು. ಆ ಮೂಲಕ ವಚನಕಾರರ ಸಂದೇಶವು ಇಡೀ ಸಮಾಜಕ್ಕೆ ತಲುಪಬೇಕು ಎಂದು ಹೇಳಿದರು.ಸೂಡಾ ಅಧ್ಯಕ್ಷರ ಎಚ್.ಎಸ್.ಸುಂದರೇಶ್ ಮಾತನಾಡಿ, ಮಾಚಿದೇವ ಮನುಷ್ಯರಲ್ಲ. ಅವರು ದೈವ ಸಂಭೂತರು. 12ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಬಂದವರು. ಆ ಮೂಲಕ ವಚನ ಕ್ರಾಂತಿ ಆರಂಭಿಸಿ ಶೋಷಿತ ವರ್ಗಗಳ ಸುಧಾರಣೆ ಮಾಡಿದರು. ಶರಣರೆಲ್ಲರೂ ಒಂದುಗೂಡಿಕೊಂಡು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು. ಈಗ ಅಂತಹ ಕಾರ್ಯವನ್ನು ಅಂಬೇಡ್ಕರ್ ಮಾಡಿದ್ದಾರೆ. ಶರಣರ ಮಾರ್ಗವನ್ನು ಅನುಸರಿಸಿದ ಅಂಬೇಡ್ಕರ್ ಎಲ್ಲರಿಗೂ ಸ್ವಾತಂತ್ರ್ಯ, ಸಮಾನವಾದ ಹಕ್ಕನನ್ನು ನೀಡಲು ಸಂವಿಧಾನವನ್ನು ರಚಿಸಿದರು. ಸಂಪತ್ತು ಎಲ್ಲ ವರ್ಗದವರಿಗೆ ಸಮಾನವಾಗಿ ಹಂಚಿಕೆ ಆಗಬೇಕೆಂಬ ಆಶಯ ಅವರದಾಗಿತ್ತು ಎಂದರು.

ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಬಿ.ಮಂಜಪ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಎಚ್.ಎಸ್.ಸದಾಶಿವಪ್ಪ ಹಾಗೂ ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಹಾಜರಿದ್ದರು.