ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಉತ್ತಮ ಸಂಪ್ರದಾಯ ಹಾಗೂ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪೂರ್ವಜರು ನಮಗೆ ನೀಡಿರುವ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಪೂರ್ವಿಕರು ಹಾಕಿಕೊಟ್ಟಿರುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುವ ಮೂಲಕ ಸಮಾಜವನ್ನು ಸುಸ್ಥಿತಿಯತ್ತ ಕೊಂಡೊಯ್ಯಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ತಿಳಿಸಿದರು.ಸಮೀಪದ ಗುಂಡಾಪುರ ಗೇಟ್ ಬಳಿಯ ಶ್ರೀಬೆಟ್ಟದರಸಮ್ಮ ದೇವಿಯ ನೂತನ ಸ್ವಾಗತ ಕಮಾನಿಗೆ ಕಳಸ ಪ್ರತಿಷ್ಠಾಪನೆ ಹಾಗೂ ಮಹಾದ್ವಾರದ ಲೋಕಾರ್ಪಣೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯರು ಕೇವಲ ಭೌತಿಕ ಜೀವನಕ್ಕೆ ಸೀಮಿತವಾಗದೆ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಉತ್ತಮ ಸಂಪ್ರದಾಯ ಹಾಗೂ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪೂರ್ವಜರು ನಮಗೆ ನೀಡಿರುವ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದಂತೆ ಧಾರ್ಮಿಕ ಆಚರಣೆಗಳು ಧರ್ಮದ ಅವಿಭಾಜ್ಯ ಅಂಗಗಳಾಗಿವೆ. ದೇವಾಲಯಗಳ ಗೋಪುರದ ಮೇಲಿರುವ ಕಳಸದ ಮೇಲೆ ಸೂರ್ಯನ ಕಿರಣಗಳು ಬೀಳುವುದು ಧನಾತ್ಮಕ ಶಕ್ತಿಯ ಸಂಕೇತವಾಗಿದೆ. ದೇಗುಲಗಳಿಗೆ ಭೇಟಿ ನೀಡುವಾಗ ಭಯಮುಕ್ತರಾಗಿ, ಶ್ರದ್ಧೆ ಮತ್ತು ಭಕ್ತಿಯಿಂದ ದೇವರನ್ನು ಪ್ರಾರ್ಥಿಸಬೇಕು. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ನೆಮ್ಮದಿ ನೀಡುವುದರ ಜತೆಗೆ ಉತ್ತಮ ಆಲೋಚನೆಗಳಿಗೆ ದಾರಿಯಾಗುತ್ತದೆ ಎಂದರು.
ಸಮಾಜದಲ್ಲಿ ಹಿಂದಿನಿಂದಲೂ ಬೆಳೆದು ಬಂದಿರುವ ಜಾತಿ ತಾರತಮ್ಯ, ಧಾರ್ಮಿಕ ಅಸಮಾನತೆ, ಮೂಢನಂಬಿಕೆ ಹಾಗೂ ಅನಿಷ್ಠ ಪದ್ಧತಿಗಳನ್ನು ತೊಡೆದುಹಾಕಬೇಕು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಆಸ್ತಿ, ಅಧಿಕಾರ ಮತ್ತು ಶಿಕ್ಷಣದ ಹಕ್ಕುಗಳನ್ನು ನಿರಾಕರಿಸಲಾಗುತ್ತಿತ್ತು. ಇಂತಹ ಸಾಮಾಜಿಕ ಅನ್ಯಾಯಗಳ ವಿರುದ್ಧ ಸಾಕಷ್ಟು ಸುಧಾರಣಾ ಚಳವಳಿಗಳು ನಡೆದಿವೆ ಎಂದರು.ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗದೆ ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಿರಬೇಕು. ದಾರ್ಶನಿಕರ ಭಕ್ತಿ ಪರಂಪರೆ ನಮಗೆ ಉತ್ತಮ ಜೀವನದ ಮಾರ್ಗದರ್ಶನ ನೀಡುತ್ತದೆ. ಹಳೆಯ ಬೇರುಗಳಿಗೆ ಹೊಸ ಚಿಗುರು ಮೂಡುವಂತೆ ನಮ್ಮ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಉಳಿಸಿಕೊಂಡು ಕಾಲಕ್ಕೆ ತಕ್ಕಂತೆ ಉತ್ತಮ ಬದಲಾವಣೆಗಳನ್ನು ಸ್ವೀಕರಿಸಬೇಕು ಎಂದರು.
ನಂತರ ಡಾ.ರಾಜು ಗುಂಡಾಪುರ ಮಾತನಾಡಿ, ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಬೆಟ್ಟದ ಅರಸಮ್ಮ ದೇವಾಲಯವು ಸುಮಾರು 1200 ವರ್ಷಗಳ ಇತಿಹಾಸ ಹೊಂದಿದೆ. 9ನೇ ಶತಮಾನದಲ್ಲಿ ಉದ್ಭವಗೊಂಡ ಪುರಾತನ ಶಕ್ತಿದೇವತೆಯ ಕ್ಷೇತ್ರವಾಗಿದೆ ಎಂದರು.ನಂತರ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಮತ್ತು ಶಿಲ್ಪ ಸುರೇಂದ್ರ ಹಾಗೂ ರತ್ನಮ್ಮ ಎನ್. ಕೆ ಕುಮಾರ್ ಇವರುಗಳಿಗೆ ಸ್ವಾಮೀಜಿ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಾವೇರಿ ನೀರಾವರಿ ನಿಗಮ ನಿಯಮಿತ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ಮಹೇಶ್, ದೇವರಾಜು, ಮಂಜೇಶ್, ಡಾ.ರಾಜು ಗುಂಡಾಪುರ, ಶಿಲ್ಪಿ ರಾಮಮೂರ್ತಿ, ಸರೋಜಮ್ಮ, ಗೀತಾ, ಶಿಲ್ಪಾ ಸುರೇಂದ್ರ, ಉಪ ತಹಸೀಲ್ದಾರ್ ನಟರಾಜು, ಎವಿಟಿ ಕುಮಾರ್, ಎನ್.ಕೆ.ಕುಮಾರ್, ವಕೀಲ ಸತ್ಯ, ಬಸವರಾಜಪ್ಪ, ಅಭಿ, ಆರ್ಟಿಒ ಸುರೇಶ್, ಚಂದನ್ ರಾಮಚಂದ್ರಗೌಡ, ಬಿ.ಕೆ.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.