ಮಂಗಗಳ ನಡವಳಿಕೆ ಅನುಸರಿಸಿ, ಸಂರಕ್ಷಣೆ ಮಾಡಬೇಕಿದೆ

| Published : Jan 09 2024, 02:00 AM IST

ಸಾರಾಂಶ

ಪರಿಸರಕ್ಕೆ ಅನುಕೂಲ ಮಾಡುವ ಮಂಗಗಳ ಸಂತತಿ ಕಡಿಮೆಯಾಗುತ್ತಿದ್ದು, ಅವುಗಳ ನಡವಳಿಕೆ ಅನುಸರಿಸಿ, ಸಂರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದು ಮೈಸೂರು ವಿಶ್ವವಿದ್ಯಾಲಯದ ಎಸ್‌ಇಆರ್‌ಬಿ ವಿಶಿಷ್ಟ ಫೆಲೊ ಆದ ಪ್ರೊ. ಮೇವಾಸಿಂಗ್ ಹೇಳಿದರು.

ಪ್ರೊ. ಮೇವಾಸಿಂಗ್‌ ಹೇಳಿಕೆ । ಸೈನ್ಸ್ ಸಂತೆ-ಮಂಗಗಳ ನಡವಳಿಕೆ ಹಾಗೂ ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರಪರಿಸರಕ್ಕೆ ಅನುಕೂಲ ಮಾಡುವ ಮಂಗಗಳ ಸಂತತಿ ಕಡಿಮೆಯಾಗುತ್ತಿದ್ದು, ಅವುಗಳ ನಡವಳಿಕೆ ಅನುಸರಿಸಿ, ಸಂರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದು ಮೈಸೂರು ವಿಶ್ವವಿದ್ಯಾಲಯದ ಎಸ್‌ಇಆರ್‌ಬಿ ವಿಶಿಷ್ಟ ಫೆಲೊ ಆದ ಪ್ರೊ. ಮೇವಾಸಿಂಗ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕುತೂಹಲಿ-ಕನ್ನಡ, ಕಲಾ ಸುರುಚಿ ದಿ ಅಕಾಡೆಮಿಕ್ ಟ್ರಸ್ಟ್ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸೈನ್ಸ್ ಸಂತೆ-ಮಂಗಗಳ ನಡವಳಿಕೆ ಹಾಗೂ ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಗಗಳಲಿ ಸಾಮಾನ್ಯ ಮಂಗ, ಸಿಂಗ‍ಳಿಕ ಮತ್ತು ಕಾಡುಪಾಪ ಎಂಬ ಮೂರು ಬಗೆಯ ಮಂಗಗಳಿವೆ. ಇವುಗಳಲ್ಲಿ ಸಾಮಾನ್ಯ ಮಂಗಗಳು ದಕ್ಷಿಣ ಭಾರತದಲ್ಲಿ ಹೆಚ್ಚು ಕಂಡು ಬರುತ್ತವೆ, ಸಿಂಗಳಿಕ ಮತ್ತು ಕಾಡು ಪಾಪಗಳು ಕಾಡಿನಲ್ಲಿ ಮಾತ್ರ ಕಾಣಿಸುತ್ತವೆ. ಸಾಮಾನ್ಯ ಮಂಗಗಳು ಕಾಡಿನಲ್ಲೂ ಕಂಡುಬರುತ್ತವೆ. ಆದರೆ ನಾಡಿನ ಮಂಗಗಳಿಗೂ ಕಾಡಿನ ಮಂಗಗಳಿಗೂ ಪ್ರತಿಯೊಂದರಲ್ಲೂ ವ್ಯತ್ಯಾಸವಿದೆ ಎಂದರು.

ಸಹ್ಯಾದ್ರಿ ಪರ್ವತ ಸಾಲಿನಲ್ಲಿ ಸಿಂಗಳಿಕ ಕೇವಲ ೩೫೦೦ರಷ್ಟಿವೆ, ಇತ್ತೀಚೆಗೆ ರಸ್ತೆ ಅಭಿವೃದ್ಧಿಯಿಂದ, ಕಾಡುಗಳ ನಾಶದಿಂದಾಗಿ ಮಂಗಗಳ ಸಂಖ್ಯೆ ಕಡಿಮೆಯಾಗುತ್ತದೆ, ಹಿಂದೆ ರಸ್ತೆಯ ಬದಿಯಲ್ಲಿದ್ದ ದೊಡ್ಡ ದೊಡ್ಡ ಮರಗಳಿದ್ದವು, ಇವುಗಳಲ್ಲಿ ಮಂಗಗಳು ವಾಸವಿದ್ದು ತಮ್ಮ ಸಂತತಿಯನ್ನು ವೃದ್ಧಿಸುತ್ತಿದ್ದವು, ಈಗ ಇವುಗಳು ಕಣ್ಮರೆಯಾಗುತ್ತಿರುವುದರಿಂದ ಮಂಗಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು. ನಾಡಿನ ಮಂಗಗಳನ್ನು ಹಿಡಿದು ಕಾಡಿಗೆ ಬಿಡುತ್ತಿರುವುದರಿಂದ ಅವು ಅಲ್ಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳಲಾಗದೆ ಸಾವನ್ನಪ್ಪುತ್ತಿವೆ ಎಂಬ ಮಾಹಿತಿ ಇದೆ, ನಾಡಿನ ಮಂಗಗಳು ಹೆಚ್ಚಾಗಿ ದೇವಾಲಯಗಳು ಮತ್ತು ಪ್ರವಾಸಿ ಸ್ಥಳದಲ್ಲಿ ಕಂಡು ಬರುತ್ತಿರುವುದರಿಂದ ಅವುಗಳ ನಡಾವಳಿ ಅನುಸರಿಸಿ ಅವುಗಳ ಅನುಕೂಲಕ್ಕೆ ತಕ್ಕಂತೆ ಮರಗಳನ್ನು ಬೆಳೆಸಿ ಸಂರಕ್ಷಿಸಬೇಕಾಗಿದೆ, ಮಂಗಗಳು ಹಣ್ಣು ಹಂಪಲುಗಳನ್ನು ತಿಂದು ಅವುಗಳ ಬೀಜಗಳನ್ನು ನೆಲಕ್ಕೆ ಹಾಕುತ್ತಿರುವುದರಿಂದ ಅವುಗಳು ಮೊಳಕೆ ಹೊಡೆದು ಸಸ್ಯ ಸಮೃದ್ಧಿಯಾಗುತ್ತದೆ, ಕುರುಚಲು ಕಾಡುಗಳನ್ನು ಅಭಿವೃದ್ಧಿಪಡಿಸುವುದರಿಂದ ಮಂಗಗಳನ್ನು ಸಂರಕ್ಷಣೆ ಮಾಡಬಹುದು ಎಂದರು.ಚಾಮುಂಡಿ ಬೆಟ್ಟದಲ್ಲಿ ಮಂಗಗಳ ಸಂತತಿ ಸ್ಥಿರ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಂಗಳಗಳ ಬಗ್ಗೆ 30 ವರ್ಷಗಳಿಂಗದ ಅಧ್ಯಯನ ಮಾಡುತ್ತಿದ್ದು, ಚಾಮುಂಡಿ ಬೆಟ್ಟದಲ್ಲಿ ಮಾತ್ರ ಮಂಗಗಳ ಸಂಖ್ಯೆ ಸ್ಥಿರವಾಗಿದ್ದು, ಮೈಸೂರಿನಿಂದ ಬಂಡೀಪುರದವರಗಿನ ರಸ್ತೆಯ ಬದಿಯಲ್ಲಿ ಸಾಲು ಸಾಲು ಮರಗಳಿದ್ದು, ಆಲದ ಮರದಲ್ಲಿ ಮಂಗಗಳು ಆಶ್ರಯ ಪಡೆದುಕೊಂಡಿದ್ದವು. ಹಂತಹಂತವಾಗಿ ರಸ್ತೆ ಅಭಿವೃದ್ಧಿ ಮಾಡಿದ ಪರಿಣಾಮ ಅದರಲ್ಲೂ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮರಗಳೇ ಇಲ್ಲವಾಗಿದ್ದು, ಮಂಗಗಳೂ ಇಲ್ಲವಾಗಿವೆ. ಇನ್ನೂ ಮೈಸೂರು- ಬಂಡೀಪುರ ರಸ್ತೆಯಲ್ಲೂ ಮರಗಳು ಕಡಿಮೆಯಾಗುತ್ತಿದ್ದು, ಮಂಗಗಳು ಕಡಮೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಿಎಫ್‌ಟಿಆರ್‌ಐನ ನಿವೃತ್ತ ಮುಖ್ಯ ವಿಜ್ಞಾನಿ ಹಾಗೂ ಕುತೂಹಲಿ ಕನ್ನಡದ ಮಾಸಪತ್ರಿಕೆಯ ಸಂಪಾದಕರಾದ ಕೊಳ್ಳೇಗಾಲ ಶರ್ಮ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪತ್ರಕರ್ತ ಕೆ.ಎಸ್‌. ಬನಶಂಕರ ಆರಾಧ್ಯ ನಿರೂಪಿಸಿದರು. ಸಂಘದ ಅಧ್ಯಕ್ಷರಾದ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಲಕ್ಕೂರು, ಶುಭಾಕರ, ದೀನಬಂಧು ಸಂಸ್ಧೆಯ ಗೌರವ ಕಾರ್ಯದರ್ಶಿ ಪ್ರೊ. ಜಯದೇವ್, ರೈತ ಸಂಘದ ಹೊನ್ನೂರು ಪ್ರಕಾಶ್, ರಂಗಕರ್ಮಿ ಕೆ. ವೆಂಕಟರಾಜು ಹಿರಿಯ ಪತ್ರಕರ್ತರಾದ ಎ.ಡಿ. ಸಿಲ್ವ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಕೆ. ವೆಂಕಟೇಶ್‌, ಪತ್ರಕರ್ತರು ಉಪಸ್ಥಿತರಿದ್ದರು.