ಸಾರಾಂಶ
ಬೆಂಗಳೂರು: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 165 ಘಟಕಗಳಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ, ಹಾರ್ಪಿಕ್ ಬಳಕೆ ಮಾಡಲಾಗುತ್ತಿರುವ ಕುರಿತಂತೆ ಅ. 22ರಂದು ‘ಕನ್ನಡಪ್ರಭ’ ದಿನಪತ್ರಿಕೆ ವರದಿ ಮಾಡಿತ್ತು. ಆ ವರದಿ ಆಧರಿಸಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ವೈಷ್ಣವಿ ಅವರು, ರಾಜ್ಯದಲ್ಲಿ ಗೋಲ್‌ಗಪ್ಪಾ ಘಟಕಗಳಲ್ಲಿ ನೈರ್ಮಲ್ಯ ಕಾಪಾಡಲಾಗುತ್ತಿದೆಯೇ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಸ್ತುಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ 12 ಘಟಕಗಳು ನೈರ್ಮಲ್ಯ ಕಾಪಾಡದೆ ಗೋಲ್‌ಗಪ್ಪಾ ತಯಾರಿಸುತ್ತಿದ್ದದ್ದು ಕಂಡು ಬಂದಿದ್ದು, ಆ ಘಟಕಗಳ ಮಾಲೀಕರಿಂದ 13 ಸಾವಿರ ರು. ದಂಡ ವಸೂಲಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಳಿದಂತೆ 165 ಘಟಕಗಳಲ್ಲಿ ಗೋಲ್‌ಗಪ್ಪಾ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಗೋಲ್‌ಗಪ್ಪಾಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಬಳಸಲಾಗುತ್ತಿದೆಯೇ ಎಂಬುದು ತಿಳಿದು ಬರಲಿದೆ. ಒಂದು ವೇಳೆ ಸೇವನೆಗೆ ಯೋಗ್ಯವಲ್ಲದ ವಸ್ತು ಬಳಸುತ್ತಿರುವುದು ದೃಢಪಟ್ಟರೆ, ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ತಿಳಿಸಿದ್ದಾರೆ.