ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿಯೇ ವ್ಯವಹಾರಿಕ ಜ್ಞಾನವನ್ನು ಗಳಿಸಬೇಕು. ಈ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲಿ ಆಯೋಜನೆ ಮಾಡುವ ಆಹಾರ ಮೇಳ ಉತ್ತೇಜಿತವಾಗಿದೆ ಎಂದು ಟೈಮ್ಸ್ ಹಾಸನ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಪಿ. ಉಲಿವಾಲ ತಿಳಿಸಿದರು.ಪಟ್ಟಣದ ಟೈಮ್ಸ್ ಹಾಸನ ಪದವಿಪೂರ್ವ ಕಾಲೇಜಿನಲ್ಲಿ ನಡೆದ "ಫುಡ್ ಫೆಸ್ಟ್ " ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿತ್ಯವೂ ನಡೆಯುವ ವ್ಯವಹಾರವನ್ನು ಅವಲೋಕನ ಮಾಡಿದರೆ ಆಹಾರ ಉತ್ಪಾದನೆ, ಬಳಕೆ ಕುರಿತು ಅರಿವನ್ನು ಹೊಂದಬಹುದಾಗಿದೆ. ಅನ್ನದಾತನ ಶ್ರಮದ ಅರಿವು ಮುಖ್ಯ. ಹೀಗಾಗಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಚನಾ ವಿದ್ಯಾಲಯದ ಮುಖ್ಯ ಶಿಕ್ಷಕ ವಿಜಯ್ ಕುಮಾರ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಮನಸ್ಸು ಗೊಂದಲಮಯವಾಗುತ್ತಿದೆ. ಒತ್ತಡದಿಂದ ಹೊರಬರಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಪ್ರತಿ ವಿದ್ಯಾರ್ಥಿಗಳು ಬಗೆ ಬಗೆಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನ, ಸಿದ್ಧಪಡಿಸುವಿಕೆ ಮತ್ತು ಆಹಾರ ಪದಾರ್ಥಗಳ ಬೆಲೆಗಳನ್ನು ಮನಗಂಡಿದ್ದಾರೆ. ಇದೇ ನಿಟ್ಟಿನಲ್ಲಿ ದೇಶದಲ್ಲಿ ಆಗುತ್ತಿರುವ ಬೆಲೆ ಏರಿಕೆ, ಆಹಾರ ಬಳಕೆಯ ಬಗ್ಗೆಯೂ ಸ್ವಲ್ಪಮಟ್ಟಿನ ತಿಳಿವಳಿಕೆ ಹೊಂದಬೇಕಿದೆ. ನಿತ್ಯವೂ ಸೇವನೆ ಮಾಡುವ ಯಾವುದೇ ಆಹಾರ ಪದಾರ್ಥಗಳನ್ನು ವ್ಯಯಮಾಡದಂತೆ ಸೇವನೆ ಮಾಡಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಸಲಹೆ ನೀಡಿದರು.ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ ಮಾತನಾಡಿ, ಈಗಾಗಲೇ ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಬಲು ದುಬಾರಿಯಾಗಿದೆ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ವಿದ್ಯೆ ಕಲಿಯುವ ಸಂದರ್ಭದಲ್ಲಿ ಆಹಾರ ಮೇಳ ಆಯೋಜನೆ ಮಾಡಿರುವುದು ಅವರಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸಿದೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ 15 ಸ್ಟಾಲ್‌ಗಳಲ್ಲಿ ಮಾರಾಟಕ್ಕೆ ಇಟ್ಟು 66 ಸಾವಿರ ರು. ವಹಿವಾಟು ನಡೆಸಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸಿಕೊಂಡರು. ವಿಶೇಷವಾಗಿ ವಿದ್ಯಾರ್ಥಿಗಳ ಪೋಷಕರು ಫುಡ್ ಫೆಸ್ಟ್‌ನಲ್ಲಿ ಪಾಲ್ಗೊಂಡು ಮಕ್ಕಳು ಸ್ವಯಂಪ್ರೇರಿತವಾಗಿ ಸಿದ್ಧಪಡಿಸಿದ್ದ ವಿವಿಧ ಬಗೆಯ ಖಾದ್ಯಗಳನ್ನು ಖರೀದಿಸಿ ಬೆಂಬಲಿಸಿದರು.