ಒಕ್ಕಲಿಗನ ಉತ್ಸಾಹದಿಂದ ದೇಶಕ್ಕೆ ಅನ್ನ: ರಂಭಾಪುರಿ ಶ್ರೀ

| Published : Feb 02 2025, 11:48 PM IST

ಸಾರಾಂಶ

ಗೊಬ್ಬರ ಮತ್ತು ಬೀಜದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಾಗ ಕೃಷಿ ಲಾಭದಾಯಕವಾಗಲಿದೆ.

ಹಗರಿಬೊಮ್ಮನಹಳ್ಳಿ: ಗೊಬ್ಬರ ಮತ್ತು ಬೀಜದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಾಗ ಕೃಷಿ ಲಾಭದಾಯಕವಾಗಲಿದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ತಿಳಿಸಿದರು.ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮಹಾದೇವತಾತನ ರಥೋತ್ಸವದ ಹಿನ್ನೆಲೆಯಲ್ಲಿ ನಡೆದ ಕೃಷಿಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಗಳು ರೈತಪರ ಯೋಜನೆಗಳನ್ನು ರೂಪಿಸಿ ರೈತರ ಕಲ್ಯಾಣಕ್ಕೆ ಶ್ರಮಿಸಬೇಕು. ಒಕ್ಕಲಿಗ ಉತ್ಸಾಹದಿಂದ ವ್ಯವಸಾಯ ಮಾಡಿ ದೇಶಕ್ಕೆ ಅನ್ನವನ್ನು ಹಾಕುತ್ತಾನೆ ಎಂದರು.

ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿ, ಅನ್ನದಾತರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಮಸ್ಯೆಗಳಿಗೆ ಪರಸ್ಪರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೃಷಿ ಮೇಳ ಆಯೋಜಿಸಿದೆ. ಸಾಂಪ್ರದಾಯಿಕ ಬೆಳೆ ಪದ್ಧತಿ ಜೊತೆಗೆ ಕೃಷಿತಜ್ಞರ ಮಾಹಿತಿ ಕೃಷಿಕರಿಗೆ ಅಗತ್ಯವಿದೆ. ಕೃಷಿ ಜೊತೆಗೆ ಉಪಕಸುಬುಗಳ ಮೂಲಕ ರೈತರು ಆರ್ಥಿಕ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸುನೀಲ್ ನಾಯ್ಕ ಮಾತನಾಡಿ, ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬೆಳೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೃಷಿಮೇಳದಲ್ಲಿ ವಿವಿಧ ತಳಿ ಜಾನುವಾರುಗಳ ಪರಿಚಯ, ಕೃಷಿ ಇಲಾಖೆ ಸಿರಿಧಾನ್ಯ ಪ್ರದರ್ಶನ, ತೋಟಗಾರಿಕೆ ಇಲಾಖೆ ಬೆಳೆಗಳು, ತಾಳೆ ಬೆಳೆ, ಔಷಧಿ ಸಿಂಪರಣೆ ಡ್ರೋನ್, ಮಳೆಮಾಪಕ, ತರಾವರಿ ಕೃಷಿಪರಿಕರಗಳು, ಉಳುಮೆಯ ಟ್ರ್ಯಾಕ್ಟರ್‌ಗಳು ಗಮನ ಸೆಳೆದವು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಾರುಕೇಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹಾಯಕ ತೋಟಗಾರಿಕೆ ನಿರ್ದೇಶಕ ಸುನೀಲ್, ಕೃಷಿ ಅಧಿಕಾರಿಗಳಾದ ಗೀತಾ ಬೆಸ್ತರ್, ಆತ್ಮ ಯೋಜನೆ ಅನುಷ್ಠಾನಾಧಿಕಾರಿ ಬೋಜ್ಯಾನಾಯ್ಕ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹರಿಶ್ಚಂದ್ರ ನಾಯ್ಕ, ಕೃಷಿ ಸಂಶೋದನಾ ಕೇಂದ್ರದ ಬೇಸಾಯ ಮುಂದಾಳು ಡಾ.ಸಿ.ಎಂ. ಕಾಲಿಬಾವಿ, ಕೃಷಿ ಪಂಡಿತ ಎಸ್.ಎಸ್.ಎಂ. ಕೊಟ್ರೇಶ್, ರೈತರಾದ ನಿಂಗಪ್ಪ, ಕರೆಂಗಿ ಸುಭಾಷ್, ಮಹಾದೇವ, ಸುರೇಶ, ವೀರೇಶ, ವಾಸೀಮ್, ವಿನಯ್ ಇದ್ದರು.