ಸಾರಾಂಶ
ತಾಲೂಕು ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಶ್ರೀನಾಥಬಾಬು ನೇತೃತ್ವದಲ್ಲಿ ಪಟ್ಟಣದ ವಿವಿಧ ಅಂಗಡಿ ಮಳಿಗೆ, ಹೋಟೆಲ್ ಗಳಿಗೆ ದಿಢೀರ್ ದಾಳಿ ನಡೆಸಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಿದರಲ್ಲದೇ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ತಾಲೂಕು ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಶ್ರೀನಾಥಬಾಬು ನೇತೃತ್ವದಲ್ಲಿ ಪಟ್ಟಣದ ವಿವಿಧ ಅಂಗಡಿ ಮಳಿಗೆ, ಹೋಟೆಲ್ ಗಳಿಗೆ ದಿಢೀರ್ ದಾಳಿ ನಡೆಸಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಿದರಲ್ಲದೇ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡರು.ಇಲ್ಲಿನ ದಬ್ಬೇಘಟ್ಟ ರಸ್ತೆ, ಬಿರ್ಲಾ ಸರ್ಕಲ್, ತಿಪಟೂರು ರಸ್ತೆ, ಬಾಣಸಂದ್ರ ರಸ್ತೆ ಮತ್ತು ಮಾಯಸಂದ್ರ ರಸ್ತೆಯಲ್ಲಿರುವ ಟೀ ಅಂಗಡಿ, ದಿನಸಿ ಅಂಗಡಿ ಮಳಿಗೆ, ಬೇಕರಿ, ಹೋಟೆಲ್ ಗಳಿಗೆ ಅಧಿಕಾರಿಗಳು ಭೇಟಿ ನೀಡಿದರು. ತಿಂಡಿ ಪದಾರ್ಥಗಳು ಸೇರಿದಂತೆ ಇನ್ನಿತರ ಆಹಾರ ವಸ್ತುಗಳ ಗುಣಮಟ್ಟ ಮತ್ತು ಅವುಗಳ ಉತ್ಪಾದನೆ ಮತ್ತು ಅವಧಿ ಮುಗಿಯುವ ಮುನ್ನಾ ಪದಾರ್ಥಗಳನ್ನು ಮಾರಾಟ ಮಾಡಬೇಕು. ಪ್ರತಿಯೊಬ್ಬ ಅಂಗಡಿ ಮಾರಾಟಗಾರರೂ ಪಟ್ಟಣ ಪಂಚಾಯಿತಿಯಿಂದ ಆಹಾರ ಸುರಕ್ಷತೆ ಮತ್ತು ಅಧಿಕೃತ ಪರವಾನಗಿ ಪತ್ರ ಪಡೆದೇ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದರು.ಪಾಸ್ಟಿಕ್ ಬಳಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಲಾಗಿದ್ದು. ಅಂಗಡಿಗಳಲ್ಲಿ 40 ಮೈಕ್ರಾನ್ ಮೇಲ್ಪಟ್ಟ ಪ್ಲಾಸ್ಟಿಕ್ ಮಾತ್ರ ಬಳಸಬೇಕು, ಕವರ್ ಗಳನ್ನು ಮಾರುವಂತಿಲ್ಲ. ಯಾವುದೇ ಬಗೆಯ ತಂಬಾಕು ಉತ್ಪನಗಳನ್ನು ಮಾರಾಟ ಮಾಡುವ ಮುನ್ನ ಪರವಾನಗಿ ಅಗತ್ಯ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಮಾಡಿದರೆ ದಂಡ ವಿಧಿಸಲಾಗುತ್ತದೆ. ಧೂಮಪಾನ ಸೇವನೆ ನಿಷೇಧಿಸಲಾಗಿದೆ ಎಂಬ ಫಲಕಗಳನ್ನು ಪ್ರತಿಯೊಂದು ಅಂಗಡಿ ಮುಂದೆ ಮಾಲೀಕರು ಕಡ್ಡಾಯವಾಗಿ ಹಾಕುವಂತೆ ಮಾರಾಟಗಾರರಿಗೆ ಸೂಚನೆ ನೀಡಿದರು.ಇದೇ ವೇಳೆ ಕೆಲ ಅಂಗಡಿಗಳಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಸಂಗ್ರಹಣೆ ಮಾಡಿದ್ದನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಶಪಡಿಸಿಕೊಂಡರು.ಈ ಸಂದರ್ಭದಲ್ಲಿ ಟಿಎಚ್.ಒ ಡಾ.ರಂಗನಾಥ್, ಆಹಾರ ಸುರಕ್ಷತಾ ಅಧಿಕಾರಿ ಯೋಗೀಶ್, ಆರೋಗ್ಯ ಇಲಾಖೆಯ ಬೋರೇಗೌಡ, ಸದಾಶಿವಯ್ಯ, ಪಟ್ಟಣ ಪಂಚಾಯಿತಿ ಜೂನಿಯರ್ ಪ್ರೊಗ್ರಾಮರ್ ಕೆ.ಆರ್.ಕಾಂತರಾಜು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು. ತಂಬಾಕು ಪದಾರ್ಥಗಳು, ಪ್ಲಾಸ್ಟಿಕ್ ಕವರ್ ಗಳನ್ನು ಅಂಗಡಿ, ಹೋಟೆಲ್ ಗಳಲ್ಲಿ ಸೀಜ್ ಮಾಡುವ ಬದಲು ಫ್ಯಾಕ್ಟರಿಗಳನ್ನೇ ಬಂದ್ ಮಾಡಿದರೆ ಯಾರೂ ಸಹ ಮಾರಾಟ ಮಾಡುವುದಿಲ್ಲ. ಫ್ಯಾಕ್ಟರಿಗಳಿಂದ ಬಂದರೇ ತಾನು ತಂದು ಮಾರುವುದು. ಅಲ್ಲಿ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟು ಇಲ್ಲಿ ಸಣ್ಣ ಪುಟ್ಟ ಅಂಗಡಿಯವರನ್ನು ಟಾರ್ಗೆಟ್ ಮಾಡಿ ಸೀಜ್ ಮಾಡಿದರೆ ಏನು ಪ್ರಯೋಜನ ಎಂದು ಕೆಲವು ಅಂಗಡಿಯ ಮಾಲೀಕರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಫ್ಯಾಕ್ಟರಿಯನ್ನೇ ಕ್ಲೋಸ್ ಮಾಡಿದರೆ ಉತ್ಪಾದನೆಯೇ ನಿಲ್ಲುತ್ತದೆ. ಅಲ್ಲೇ ಮೊದಲು ರೇಡ್ ಮಾಡಿ. ಸರಿಯಾಗುತ್ತೆ. ನಮ್ಮಂತಹ ಬಡಪಾಯಿಗಳ ಮೇಲೆ ರೈಡ್ ಮಾಡಬೇಡಿ. ಮೊದಲು ಅಲ್ಲಿ ನಿಲ್ಲಿಸಿ.ಎಲ್ಲಾ ತಾನೇ ತಾನಾಗಿ ಸರಿ ಹೋಗುತ್ತೆ ಎಂದು ಕೆಲವರು ಅಧಿಕಾರಿಗಳಿಗೆ ಹೇಳುತ್ತಿದ್ದುದು ಕೇಳಿಬಂತು. ನಾವೆಲ್ಲೋ ಐದತ್ತು ಕೇಜಿ ತಂದಿರಬಹುದು. ಫ್ಯಾಕ್ಟರಿಗಳಲ್ಲಿ ಟನ್ ಗಟ್ಟಲೆ ಪ್ಲಾಸ್ಡಿಕ್ ಕವರ್ ಗಳು ಸಿಗುತ್ತವೆ. ಮೊದಲು ಅಲ್ಲಿ ರೈಡ್ ಮಾಡಿ. ಎಲ್ಲೂ ಪ್ಲಾಸ್ಟಿಕ್ ಕವರ್ ಗಳು ಸಿಗಲ್ಲ ಎಂದಾದರೆ ಜನರೂ ಸಹ ಬಟ್ಟೆಯ ಕೈ ಚೀಲಗಳ ಮೊರೆ ಹೋಗುತ್ತಾರೆ. ಆಗ ತಂತಾನೇ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಬಹುದು ಎಂದು ಅಂಗಡಿಯವರು ಹೇಳಿದರು,ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿ ಅಂಗಡಿಯವರು ಹೇಳುತ್ತಿದ್ದುದನ್ನು ಕೇಳಿಯೂ ಕೇಳಿಸದವರಂತೆ ಮುಂದಿನ ಅಂಗಡಿಗಳತ್ತ ತೆರಳುತ್ತಿದ್ದರು.