ಏಪ್ರಿಲ್ ಒಂದರಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

| Published : Mar 23 2024, 01:02 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು. ಅಲ್ಲದೆ ಜಾನುವಾರುಗಳ ಲಸಿಕಾಕರಣಕ್ಕೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಾದ್ಯಂತ ಏಪ್ರಿಲ್ 1 ರಿಂದ 30 ರವರೆಗೆ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು, ವ್ಯಾಪಕ ಪ್ರಚಾರದೊಂದಿಗೆ ಮನೆಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕಾಕರಣ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ಅಭಿಯಾನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ಮಾತನಾಡಿದ ಅವರು, ಬೇಸಿಗೆ ಸಂದರ್ಭ ವಾಗಿರುವುದರಿಂದ ಜಾನುವಾರುಗಳಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಬೇರೆ ರೋಗ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆ ನೀಡಬೇಕು. ಸಾಂಕ್ರಾಮಿಕ ರೋಗಗಳು ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡಬೇಕು. ಯಾವುದೇ ಜಾನುವಾರುಗಳು ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು. ಶೇ.100 ರಷ್ಟು ಲಸಿಕಾಕರಣ ಗುರಿ ತಲುಪ ಬೇಕು. ಲಸಿಕೆ ನೀಡಿದ ಪ್ರತಿ ಜಾನುವಾರು ಮಾಹಿತಿಯನ್ನು ತಪ್ಪದೇ ತಂತ್ರಾಂಶದಲ್ಲಿ ವರದಿ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಾನುವಾರು ನಿಖರ ಮಾಹಿತಿಗೆ ಸೂಚನೆ: ಜಿಲ್ಲೆಯ ಜಾನುವಾರುಗಳ ಸಂಖ್ಯೆ ಎಷ್ಟು? ಸುಸ್ಥಿಯಲ್ಲಿರುವ ಬೋರ್‍ವೆಲ್‍ಗಳ ಸಂಖ್ಯೆ ಎಷ್ಟು? ಎಷ್ಟು ಟನ್ ಹಸಿರು ಮೇವು ಉತ್ಪಾದನೆಯಾಗುತ್ತಿದೆ? ಎಷ್ಟು ರೈತರು ಹಸಿರು ಮೇವು ಬೆಳೆಯುತ್ತಿದ್ದಾರೆ? ಯಾವ ಪ್ರದೇಶಗಳಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ಅವಶ್ಯಕತೆ ಇದೆ? ಈಗ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯಲ್ಲಿ ಆಶ್ರಯ ಪಡೆಯುತ್ತಿರುವ ಜಾನುವಾರುಗಳ ಸಂಖ್ಯೆ ಎಷ್ಟು? ಸ್ವತಃ ಮಾಲೀಕರೇ ಮೇವು ಒದಗಿಸುತ್ತಿರುವ ಜಾನು ವಾರುಗಳ ಸಂಖ್ಯೆ ಎಷ್ಟು? ವಲಸೆ ಹೋದ ಕುರಿ ಹಾಗೂ ಮೇಕೆ ಸಂಖ್ಯೆ ಎಷ್ಟು? ಎಂಬ ತಾಲೂಕುವಾರು ನಿಖರ ಮಾತಿಯನ್ನು ಸಂಗ್ರಹಿಸಿ ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪಶು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತೀವ್ರ ಬರಗಾಲದ ಹಿನ್ನೆಲೆಯಲ್ಲಿ 2018-19 ಸಾಲಿನ ಜಾನುವಾರು ಗಣತಿ ಆಧಾರಿಸಿ ಜಿಲ್ಲೆಯಲ್ಲಿ ಗೋಶಾಲೆಗಳು ಹಾಗೂ ಮೇವು ಬ್ಯಾಂಕುಗಳನ್ನು ತೆರೆಯ ಲಾಗಿದೆ ಇವುಗಳು ಸದ್ಬಳಕೆಯಾಗಬೇಕು. ನಾಮಕಾವಸ್ಥೆಗೆ ಗೋಶಾಲೆಗಳನ್ನು ತೆರೆಯುವಂತಾಗಬಾರದು. ಯಾವ ಸ್ಥಳಗಳಲ್ಲಿ ಗೋಶಾಲೆಗಳ ಅಗತ್ಯ ಇಲ್ಲವೋ ಅಲ್ಲಿ ಮೇವು ಬ್ಯಾಂಕ್ ತೆರೆಯಬೇಕು. ಗೋಶಾಲೆಗಳಲ್ಲಿ ತಾತ್ಕಾಲಿಕ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

20ನೇ ಜಾನುವಾರು ಗಣತಿ ಆಧಾರಿಸಿ ಜಿಲ್ಲೆಯಲ್ಲಿ 3,38,907 ಜಾನುವಾರುಗಳಿವೆ ಅಂದಾಜಿಸಲಾಗಿದೆ. 2,97,800 ಲಸಿಕಾ ಡೋಸ್‍ಗಳು ಸರಬರಾಜು ಆಗಿವೆ. 6 ತಾಲೂಕುಗಳಲ್ಲಿ 991 ಗ್ರಾಮಗಳನ್ನು ಲಸಿಕಾಕರಣ ಕಾರ್ಯಕ್ಕೆ ಗುರುತಿಸಿ, 3390 ಬ್ಲಾಕ್‍ಗಳನ್ನಾಗಿ ವಿಭಾಗಿಸಲಾಗಿದೆ. 237 ಲಸಿಕಾದಾರರು ಪ್ರತಿ ದಿನ ಬೆಳಿಗೆ 6 ಗಂಟೆಯಿಂದ 10 ಗಂಟೆಯವರೆಗೆ ಮನೆ ಮನೆ ಬಾಗಿಲುಗಳಿಗೆ ತೆರಳಿ ಲಸಿಕೆ ನೀಡಲಿದ್ದಾರೆ. ಈ ಹಿಂದೆ ಜರುಗಿದ 4ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ 1,96,992 ದನಗಳು ಹಾಗೂ 86797 ಎಮ್ಮೆಗಳು ಸೇರಿ ಒಟ್ಟು 2,83,789 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಜಿ.ಇಂದಿರಾಬಾಯಿ ಸಭೆಯಲ್ಲಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.