ಮುಸ್ಲಿಂ ಕುಟುಂಬದಿಂದ ಅಯ್ಯಪ್ಪ ಮಾಲಾಧಾರಿಗಳ ಪಾದಪೂಜೆ!

| Published : Jan 02 2025, 12:30 AM IST

ಸಾರಾಂಶ

ಹಜರೇಸಾಬ ಬುಡ್ಡೇಸಾಬ್ ಬೆಳಗಲಿ ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಾವೈಕೈತೆ ಮೆರೆದಿದ್ದಾರೆ.

ಕುಂದಗೋಳ: ಸಂತ ಶಿಶುನಾಳ ಶರೀಫರು ಹಾಗೂ ಗುರು ಗೋವಿಂದ ಭಟ್ಟರ ನಾಡು, ತಾಲೂಕಿನ ಯರಗುಪ್ಪಿ ಗ್ರಾಮದ ಗಾರೆ ಕೆಲಸ ಮಾಡುವ ಹಜರೇಸಾಬ ಬುಡ್ಡೇಸಾಬ್ ಬೆಳಗಲಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಾವೈಕೈತೆ ಮೆರೆದಿದ್ದಾರೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಜಾತಿ, ಮತ, ಪಂಥ ಮೇಲು, ಕೀಳು ಧರ್ಮ ಇವು ಯಾವುದು ಗಣನೆಗೆ ತೆಗದುಕೊಳ್ಳದೆ ಭಾವೈಕ್ಯತೆಗೆ ಮುನ್ನುಡಿ ಬರೆದ ಗ್ರಾಮವಿದು. ತಲೆತಲಾಂತರಗಳಿಂದಲೂ ಸಾಮರಸ್ಯ ಬದುಕನ್ನು ಗ್ರಾಮ ಕಲಿಸಿದೆ. ಇಲ್ಲಿ ನಾವೆಲ್ಲ ಒಂದೇ ಕುಟುಂಬದ ಸಹೋದರ-ಸಹೋದರಿಯರು ಎಂಬ ಭಾವನೆಯಿಂದ ಬೆಳೆದು ಬಂದಿದ್ದೇವೆ. ಆ ನಿಟ್ಟಿನಲ್ಲಿ ಇವತ್ತು ಅಯ್ಯಪ್ಪಸ್ವಾಮಿ ಪಾದಪೂಜೆ ಏರ್ಪಡಿಸಿ ಕುಟುಂಬದಲ್ಲಿ ಶಾಂತಿ ಸಹಬಾಳ್ವೆ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದು ಹಜರೇಶ ಬೆಳಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿಂದೆ ಯರಗುಪ್ಪಿ ಗ್ರಾಮದಲ್ಲಿ ಪ್ರತಿವರ್ಷ ಹಿಂದೂ ಮುಸ್ಲಿಂ ಸಮುದಾಯದವರು ಸೇರಿ ಯುವಕ ಮಂಡಳದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಶಾಸ್ತ್ರೋಕ್ತವಾಗಿ ಪೂಜೆ, ಪುನಸ್ಕಾರ, ಸತ್ಕರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಅಯ್ಯಪ್ಪ ಮಾಲಾಧಾರಿಗಳಿಗೆ ಪಾದಪೂಜೆ ಮಾಡಿ, ಮನೆಯಲ್ಲಿ ಅಯ್ಯಪ್ಪಸ್ವಾಮಿಗೆ ಪೂಜೆ ಪುನಸ್ಕಾರ ಏರ್ಪಡಿಸಿ. ಮನೆಯಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿ ಭಾವೈಕ್ಯತೆ ಮೆರೆದಿದ್ದಾರೆ.