- ₹37 ಲಕ್ಷದಲ್ಲಿ ಫುಟ್ಬಾಲ್ ಪುತ್ಥಳಿ, ಮೋದಿ ವೃತ್ತಕ್ಕೆ ದೂಡಾ ಕಾಯಕಲ್ಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕಾಂಗ್ರೆಸ್-ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲಾ ಪ್ರತಿಷ್ಟೆಯ ಫುಟ್ಬಾಲ್ ವೃತ್ತವಾಗಿದ್ದ ನಗರದ ಡಾ. ಎಂ.ಸಿ. ಮೋದಿ ವೃತ್ತದ ಆಕರ್ಷಕ ಫುಟ್ ಬಾಲ್ ಪುತ್ಥಳಿಯನ್ನು ಮಂಗಳವಾರ ರಾತ್ರೋರಾತ್ರಿ ನಾಮಾವಶೇಷವೂ ಇಲ್ಲದಂತೆ ತೆರವು ಮಾಡಿರುವುದು ಟೀಕೆಗೆ ಗುರಿಯಾಗುತ್ತಿದೆ.
ಮೂರು ದಶಕದ ಹಿಂದೆ ಪಿಫಾ ವಿಶ್ವ ಫುಟ್ಬಾಲ್ ಟೂರ್ನಿ ನೆನಪಿಗೆ ಆಗಲೂ ಸಚಿವರಿದ್ದ ಎಸ್ಸೆಸ್ ಮಲ್ಲಿಕಾರ್ಜುನ ಸೂಚನೆ ಮೇರೆಗೆ ನಗರಸಭೆ ಅಂದಿನ ಸದಸ್ಯ, ಹಾಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸೇರಿದಂತೆ ಕಾಂಗ್ರೆಸ್ಸಿನ ಸದಸ್ಯರು ಮೋದಿ ವೃತ್ತದಲ್ಲಿ ಫುಟ್ ಬಾಲ್ ಪುತ್ಥಳಿ ಪ್ರತಿಷ್ಟಾಪಿಸಿದ್ದರು. ಹರಳೆಣ್ಣೆ ಕೊಟ್ರಬಸಪ್ಪ ವೃತ್ತ ನಿರ್ಮಿಸಿದ್ದ ತುಮಕೂರಿನ ಕ್ಯಾಬ್ ಕನ್ಸಟ್ರಕ್ಷನ್ ನ ಪವಿತ್ರನ್ ಮತ್ತು ತಂಡ ಆಗ ಪುತ್ಥಳಿ ನಿರ್ಮಿಸಿತ್ತು.ಈಗ ಫುಟ್ ಬಾಲ್ ಆಕೃತಿ ಹೊರತುಪಡಿಸಿದರೆ ಉಳಿದಿದ್ದೆಲ್ಲವೂ ಹಾಳಾಗಿದ್ದರಿಂದ ಮೋದಿ ವೃತ್ತಕ್ಕೆ ಹೈಟೆಕ್ ಸ್ಪರ್ಶ ನೀಡಲು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸೂಚಿಸಿದ್ದರು. ಫುಟ್ಬಾಲ್ ಪುತ್ಥಳಿ ಇದ್ದ ಜಾಗದಲ್ಲೇ ಮತ್ತಷ್ಟು ಆಕರ್ಷಕ ಹಾಗೂ ಹೈಟೆಕ್ ವೃತ್ತ ನಿರ್ಮಿಸಲು ಕ್ಯಾಬ್ ಕನ್ಸಟ್ರಕ್ಷನ್ ನ ಪವಿತ್ರನ್ ರಿಗೆ ದೂಡಾ ಜವಾಬ್ಧಾರಿ ವಹಿಸಿದೆ. ಹಾಗಾಗಿ. ರಾತ್ರೋರಾತ್ರಿ ಪುತ್ಥಳಿ ತೆರವು ಮಾಡಿಸಲಾಗಿದೆ.
ಮೋದಿ ವೃತ್ತಕ್ಕೆ ಕಾಯಕಲ್ಪ ನೀಡುವ ಕಾಮಗಾರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೆಲ ದಿನದ ಹಿಂದೆ ಚಾಲನೆ ನೀಡಿದ್ದು, ₹37 ಲಕ್ಷ ವೆಚ್ಚದಲ್ಲಿ ದೂಡಾದಿಂದಲೇ ಫುಟ್ಬಾಲ್ ಪುತ್ಥಳಿ ಪ್ರತಿಷ್ಟಾಪಿಸಿ, ವೃತ್ತಕ್ಕೆ ಹೈಟೆಕ್ ರೂಪ ನೀಡಲು ದೂಡಾ ಮುಂದಾಗಿದೆ. ಅದೇ ವೃತ್ತದ ಅದೇ ಜಾಗದಲ್ಲೇ ಆಕರ್ಷಕ ಫುಟ್ಬಾಲ್ ಪುತ್ಥಳಿ ಇನ್ನು 2 ತಿಂಗಳಲ್ಲೇ ಪ್ರತಿಷ್ಟಾನೆಗೊಳ್ಳಲಿದೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ಹಿಂದೆ ಫುಟ್ ಬಾಲ್‌ಗೆ ಬಿಳಿ ಮತ್ತು ಕಪ್ಪು ಬಣ್ಣ ಬಳಿಯಲಾಗಿತ್ತು. ಆಗ ಮತ್ತೊಂದು ಪಕ್ಷ ಕೇಸರಿ, ಹಸಿರು ಬಣ್ಣ ಬಳಿದಿತ್ತು. ಮತ್ತೊಂದು ಪಕ್ಷ ಬಂದಾಗ ಇನ್ನೊಂದು ಬಣ್ಣ ಬಳಿದಿತ್ತು. ಅಂತಿಮವಾಗಿ ಕಪ್ಪು-ಬಿಳಿ ಬಣ್ಣದ ಫುಟ್ ಬಾಲ್ ಪುತ್ಥಳಿಯಾಗಿ, ಮಳೆ, ಚಳಿ, ಗುಡುಗು, ಬಿಸಿಲನ್ನೂ ಲೆಕ್ಕಿಸದೇ ನಿಂತಿತ್ತು. ಫುಟ್ಬಾಲ್ ಪುತ್ಥಳಿಗೆ ಸಣ್ಣಪುಟ್ಟದಾಗಿ ಹಾಳಾಗಿದ್ದು, ಉಳಿದಂತೆ ವೃತ್ತಾಕಾರದಲ್ಲಿ ಕಬ್ಬಿಣ ಹಾಳಾಗಿದ್ದು, ಟೈಲ್ಸ್ ಕಿತ್ತು ಬಂದು ಹಾಳಾಗಿದ್ದರಿಂದ ಹಳೆ ಫುಟ್ಬಾಲ್ ಪುತ್ಥಳಿ ತೆರವು ಮಾಡಿಸಲಾಗಿದೆ.
- - --15ಕೆಡಿವಿಜಿ13: ದಾವಣಗೆರೆಯ ಪ್ರತಿಷ್ಟಿತ ಡಾ. ಎಂ.ಸಿ.ಮೋದಿ ವೃತ್ತದಲ್ಲಿದ್ದ ಫುಟ್ ಬಾಲ್ ಮಾದರಿಯ ಆಕರ್ಷಕ ಪುತ್ಥಳಿ. -15ಕೆಡಿವಿಜಿ14: ದಾವಣಗೆರೆ ಡಾ. ಎಂ.ಸಿ.ಮೋದಿ ವೃತ್ತದಲ್ಲಿ ಇನ್ನು 2 ತಿಂಗಳಲ್ಲಿ ಪುನಾ ಪ್ರತಿಷ್ಟಾಪನೆ ಆಗಲಿರುವ ಹೊಸ ಮಾದರಿ ಫುಟ್ಬಾಲ್ ಪುತ್ಥಳಿ, ಹೈಟೆಕ್ ವೃತ್ತದ ಮಾದರಿ ಚಿತ್ರ. -15ಕೆಡಿವಿಜಿ15: ದಾವಣಗೆರೆಯ ಡಾ.ಎಂ.ಸಿ.ಮೋದಿ ವೃತ್ತದಲ್ಲಿದ್ದ ಫುಟ್ಬಾಲ್ ಪುತ್ಥಳಿಯನ್ನು ರಾತ್ರೋರಾತ್ರಿ ತೆರವು ಮಾಡಿರುವುದು. -15ಕೆಡಿವಿಜಿ16: ದಾವಣಗೆರೆ ಡಾ.ಎಂ.ಸಿ.ಮೋದಿ ವೃತ್ತದಲ್ಲಿದ್ದ ಫುಟ್ ಬಾಲ್ ಮಾದರಿ ರಾತ್ರೋ ರಾತ್ರಿ ತೆರವು ಮಾಡಿ, ಅಲ್ಲಿ ಮಣ್ಣಿನ ಗುಂಡಿ ಮಾತ್ರ ಬಿಟ್ಟಿರುವುದು.
- - -