ನಗರದ ಸೌಂದರ್ಯೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಪಾಲಿಕೆಯು ವರ್ತುಳದಿಂದ ಬಸವೇಶ್ವರ ಸರ್ಕಲ್ ಹಾಗೂ ಅಂಜುಮನ್ ಕಾಂಪ್ಲೆಕ್ಸ್ ಮುಂಭಾಗ ಸೇರಿದಂತೆ ರೀಗಲ್ ವೃತ್ತದ ವರೆಗೆ ರಸ್ತೆ ಬದಿಯಿರುವ ಅನಧಿಕೃತ ಡಬ್ಬಾ ಅಂಗಡಿ ತೆರವುಗೊಳಿಸಲಾಯಿತು.
ಧಾರವಾಡ:
ಮಹಾನಗರ ಪಾಲಿಕೆಯ ವಲಯ ಕಚೇರಿ 3ರ ವ್ಯಾಪ್ತಿಯಲ್ಲಿ ಅನಧೀಕೃತ ಡಬ್ಬಾ ಅಂಗಡಿ ತೆರವು ಹಾಗೂ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ಕೆಲವು ವ್ಯಾಪಾರಸ್ಥರ ವಿರೋಧದ ಮಧ್ಯೆಯೂ ಯಶಸ್ವಿಯಾಗಿ ನಡೆಯಿತು.ನಗರದ ಸೌಂದರ್ಯೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಪಾಲಿಕೆಯು ವರ್ತುಳದಿಂದ ಬಸವೇಶ್ವರ ಸರ್ಕಲ್ ಹಾಗೂ ಅಂಜುಮನ್ ಕಾಂಪ್ಲೆಕ್ಸ್ ಮುಂಭಾಗ ಸೇರಿದಂತೆ ರೀಗಲ್ ವೃತ್ತದ ವರೆಗೆ ರಸ್ತೆ ಬದಿಯಿರುವ ಅನಧಿಕೃತ ಡಬ್ಬಾ ಅಂಗಡಿ ತೆರವುಗೊಳಿಸಲಾಯಿತು. ಇದಕ್ಕಾಗಿ ವ್ಯಾಪಾರಸ್ಥರಿಗೆ ಮುಂಚಿತವಾಗಿ ನೋಟಿಸ್ ಸಹ ಪಾಲಿಕೆ ನೀಡಿತ್ತು.
ಇದರೊಂದಿಗೆ ಸಿಬಿಟಿ ರಸ್ತೆಯ ಎಡ ಹಾಗೂ ಬಲ ಬದಿಯಲ್ಲಿ ನಾಲ್ಕು ಚಕ್ರದ ದೂಡುವ ಕೈಗಾಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ರಸ್ತೆ ಅಕ್ಕಪಕ್ಕ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಮತ್ತು ಫುಟ್‌ಪಾತ್ ಸೇರಿದಂತೆ ರಸ್ತೆ ಮೇಲಿರುವ ಶೆಡ್, ಅಂಗಡಿ ಮುಗ್ಗಟ್ಟು ಮಾಲೀಕರಿಗೆ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಯಿತು.ವಿವೇಕಾನಂದ ಸರ್ಕಲ್, ಬಸ್ ನಿಲ್ದಾಣ ವರ್ತುಳ, ಸಿಎಸ್‌ಐ ಕಾಲೇಜ ರಸ್ತೆ, ಜ್ಯುಬಲಿ ವೃತ್, ಕೆಸಿಡಿ, ಉದಯ ಹಾಸ್ಟೆಲ್, ಜಯನಗರ, ಸಪ್ತಾಪೂರ ಸೇರಿದಂತೆ ವಿವಿಧ ಅಂಗಡಿಗಳಿಗೂ ಸ್ವಚ್ಛತೆ ಕಾಪಾಡುವ ಕುರಿತು ಎಚ್ಚರಿಕೆ ನೀಡಿತು. ಅಂದಾಜು 28 ಸಣ್ಣ-ಪುಟ್ಟ ಅಂಗಡಿ, ದೂಡುವ ಗಾಡಿ, ಟೆಂಟ್ ತೆರವುಗೊಳಿಸಲಾಯಿತು. ನೈರ್ಮಲ್ಯ ಉಲ್ಲಂಘಿಸಿದ ಹೋಟೆಲ್‌ಗಳಿಗೆ ಇದೇ ಸಂದರ್ಭದಲ್ಲಿ ತಲಾ ₹ 2500 ದಂಡ ವಿಧಿಸಿದ್ದು ಕಾನೂನು ಉಲ್ಲಂಘನೆ ಮಾಡುವವರು ವಿರುದ್ಧ ಕ್ರಮ ಜರುಗಿಸಲು ನೋಟಿಸ್ ನೀಡಲಾಗಿದೆ. ಒಟ್ಟಾರೆಯಾಗಿ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗದಂತೆ ವ್ಯಾಪಾರಸ್ಥರು ತಮ್ಮ ಉದ್ಯೋಗ ಮಾಡಬಹುದು. ಆದರೆ, ಪಾಲಿಕೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಪಾಲಿಕೆ ಅಧಿಕಾರಿಗಳು ನೀಡಿದರು.
ವಲಯ ಆಯುಕ್ತರಾದ ಅರವಿಂದ ಜಮಖಂಡಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಆರೋಗ್ಯ ವಿಭಾಗ, ಅಭಿವೃದ್ಧಿ ವಿಭಾಗ, ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿ ಮತ್ತು ಪೌರಕಾರ್ಮಿಕರು ಕಾರ್ಯಾಚರಣೆ ನಡೆಸಿದರು.