21 ವರ್ಷಗಳಿಂದ ದ.ಕ. ಸಂಸದರಿಗೆ ಕೇಂದ್ರ ಮಂತ್ರಿ ಭಾಗ್ಯವಿಲ್ಲ!

| Published : Jun 07 2024, 12:30 AM IST

21 ವರ್ಷಗಳಿಂದ ದ.ಕ. ಸಂಸದರಿಗೆ ಕೇಂದ್ರ ಮಂತ್ರಿ ಭಾಗ್ಯವಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

2009ರಿಂದ ಸತತ ಮೂರು ಬಾರಿ ನಳಿನ್‌ ಕುಮಾರ್‌ ಕಟೀಲು ಸಂಸದರಾಗಿದ್ದರು. ಅದರಲ್ಲಿ ಕೊನೆಯ ಎರಡು ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದ್ದರೂ ಸಚಿವ ಸ್ಥಾನ ದೊರೆಯಲಿಲ್ಲ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಸತತ ಮೂರನೇ ಬಾರಿಗೆ ಎನ್‌ಡಿಎ ಮಿತ್ರಕೂಟ ಕೇಂದ್ರದಲ್ಲಿ ಬಹುಮತದಿಂದ ಸರ್ಕಾರ ರಚನೆ ಮಾಡುತ್ತಿದೆ. ಈ ಹಿಂದೆ ದಕ್ಷಿಣ ಕನ್ನಡದಿಂದ ಗೆದ್ದವರು ಹಾಗೂ ದ.ಕ. ಮೂಲದ ಅನೇಕರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನದ ಭಾಗ್ಯ ದೊರೆತಿತ್ತು. ಆದರೆ ಕಳೆದ 21 ವರ್ಷಗಳಿಂದ ದ.ಕ. ಲೋಕಸಭಾ ಕ್ಷೇತ್ರದಿಂದ ಗೆದ್ದವರು ಕೇಂದ್ರ ಮಂತ್ರಿ ಆಗಿಯೇ ಇಲ್ಲ. ಈ ಬಾರಿಯೂ ಕೇಂದ್ರ ಸಚಿವ ಸ್ಥಾನ ಮರೀಚಿಕೆಯಾಗಿದೆ.

ರಾಜ್ಯ- ಕೇಂದ್ರದಲ್ಲಿ ಯಾರೇ ಗೆಲ್ಲಲಿ, ಸೋಲಲಿ. ರಾಜಕೀಯವಾಗಿ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ನಿರಂತರ 33 ವರ್ಷಗಳಿಂದ ಬಿಜೆಪಿ ಅಭ್ಯರ್ಥಿಗಳನ್ನೇ ಮತದಾರರು ಆಯ್ಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ದ.ಕ. ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕ್ಯಾ. ಬ್ರಿಜೇಶ್‌ ಚೌಟ ಅಧಿಕಾರದ ರಾಜಕಾರಣಕ್ಕೆ ಹೊಸಬರಾಗಿದ್ದು, ಮಂತ್ರಿಯಾಗುವ ಸಾಧ್ಯತೆ ವಿರಳ. ಹಾಗಾಗಿ ಕೇಂದ್ರ ಸಚಿವ ಸ್ಥಾನ ಜಿಲ್ಲೆಯ ಮಟ್ಟಿಗೆ ‘ಬಿಟ್ಟ ಸ್ಥಳ’ವಾಗಿಯೇ ಮುಂದುವರಿಯಲಿದೆ.ಪೂಜಾರಿ, ಧನಂಜಯ ಬಳಿಕ ಇಲ್ಲ:

ಸ್ವಾತಂತ್ರ್ಯಾನಂತರ ನಡೆದ ಚುನಾವಣೆಗಳಲ್ಲಿ 1977ರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಜನಾರ್ದನ ಪೂಜಾರಿ, ಎರಡನೇ ಅವಧಿಯಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದರು. ಮೂರನೇ ಗೆಲುವಿನಲ್ಲೂ ಕೇಂದ್ರ ಸಚಿವರಾಗಿ ಮುಂದುವರಿದರು. ನಾಲ್ಕನೇ ಗೆಲುವಿನ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾದರು. ನಂತರ ಸಂಸತ್ತಿಗೇರಿದ ಬಿಜೆಪಿಯ ಧನಂಜಯ ಕುಮಾರ್‌ ಕೂಡ 2ನೇ ಅವಧಿಯಲ್ಲಿ 13 ದಿನಗಳ ವಾಜಪೇಯಿ ಸರ್ಕಾರದಲ್ಲಿ ಕ್ಯಾಬಿನೆಟ್‌ ಸಚಿವರಾಗಿದ್ದರು. 3ನೇ ಅವಧಿಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದರು. ಕೊನೆಯ ಅವಧಿ- 2000ರಿಂದ 2003ರವರೆಗೆ ಜವಳಿ ಖಾತೆ ರಾಜ್ಯ ಸಚಿವರಾಗಿದ್ದರು. ಇದೇ ಕೊನೆ, ನಂತರ ದ.ಕ. ಕ್ಷೇತ್ರದಿಂದ ಗೆದ್ದವರಿಗೆ ಕೇಂದ್ರ ಮಂತ್ರಿ ಸ್ಥಾನ ದಕ್ಕಲೇ ಇಲ್ಲ.ನಳಿನ್‌ಗೆ ಒಲಿಯದ ಅದೃಷ್ಟ:

2009ರಿಂದ ಸತತ ಮೂರು ಬಾರಿ ನಳಿನ್‌ ಕುಮಾರ್‌ ಕಟೀಲು ಸಂಸದರಾಗಿದ್ದರು. ಅದರಲ್ಲಿ ಕೊನೆಯ ಎರಡು ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದ್ದರೂ ಸಚಿವ ಸ್ಥಾನ ದೊರೆಯಲಿಲ್ಲ. 3ನೇ ಅವಧಿಯಲ್ಲಿ ನಳಿನ್‌ ಕುಮಾರ್‌ ಬಿಜೆಪಿ ರಾಜ್ಯಾಧ್ಯಕ್ಷರಾದರೂ ಸಚಿವ ಸ್ಥಾನ ಮಾತ್ರ ಮರೀಚಿಕೆಯಾಗಿಯೇ ಉಳಿಯಿತು.

ಉಳಿದಂತೆ ಕರಾವಳಿಯವರೇ ಆದ ಯು. ಶ್ರೀನಿವಾಸ್‌ ಮಲ್ಯ, ಮಾರ್ಗರೇಟ್‌ ಆಳ್ವ, ಜಾರ್ಜ್‌ ಫರ್ನಾಂಡಿಸ್‌, ಡಿವಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಆದರೆ ಆಗ ಅವರಾರೂ ದ.ಕ.ಕ್ಷೇತ್ರವನ್ನು ಪ್ರತಿನಿಧಿಸದೇ ಬೇರೆ ಕ್ಷೇತ್ರದ ಸಂಸದರಾಗಿದ್ದರು.