ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ: ಮದುವಣಗಿತ್ತಿಯಂತೆ ಸಿಂಗಾರಗೊಂಡ ರೇಷ್ಮನಗರಿ

| Published : Jul 23 2024, 12:38 AM IST

ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ: ಮದುವಣಗಿತ್ತಿಯಂತೆ ಸಿಂಗಾರಗೊಂಡ ರೇಷ್ಮನಗರಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲಿ ರೇಷ್ಮನಗರಿ ರಾಮನಗರದಲ್ಲಿ ಆಚರಿಸಲಾಗುವ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಜಿಲ್ಲಾ ಕೇಂದ್ರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಮಂಗಳವಾರದ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ । ಸಿಎಂ, ಡಿಸಿಎಂ, ಪ್ರಮುಖರು ಭಾಗಿ

- ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದವರಿಂದ ರಸಮಂಜರಿಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲಿ ರೇಷ್ಮನಗರಿ ರಾಮನಗರದಲ್ಲಿ ಆಚರಿಸಲಾಗುವ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಜಿಲ್ಲಾ ಕೇಂದ್ರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಈಗಾಗಲೇ ಹಬ್ಬದ ಆಚರಣೆಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ರಾಮನಗರದಲ್ಲಿ ಹಳೇ ಬೆಂಗಳೂರು - ಮೈಸೂರು ಹೆದ್ದಾರಿ, ಪ್ರತಿಯೊಂದು ರಸ್ತೆ, ಬೀದಿಗಳು ಎರಡು ಬದಿಯಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಪ್ರಮುಖ ವೃತ್ತಗಳಲ್ಲಿ ದೇವತೆಗಳ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ರಾಮನಗರ ಜಗಮಗಿಸುತ್ತಿದೆ.

ಧಾರ್ಮಿಕ ಆಚರಣೆಗಳು:

ಕಳೆದ ಮಂಗಳವಾರ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಕರಗ ಸಂಬಂಧ ಧಾರ್ಮಿಕ ಆಚರಣೆಗಳು ಆರಂಭವಾಗಿ ಮುಂದುವರೆಯುತ್ತಿದೆ. ಸೋಮವಾರ ಸಂಜೆ ದೇವಾಲಯದ ಆವರಣದಲ್ಲಿ ಕರಗಧಾರಕ ದೇವಿ ಪ್ರಸಾದ್ ಅವರು, ಅಗ್ನಿಕೊಂಡ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಂಗಳವಾರದ ಬ್ರಾಹ್ಮಿ ಮೂಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ ಮಾಡಿ, ಅಲಂಕಾರ ಮಾಡಲಾಗುತ್ತದೆ. ಮಹಾಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಮಂಗಳವಾರ ಬೆಳಗ್ಗೆ ಮಡಿನೀರು ಕರಗ ನೆರವೇರಿಸಲಾಗುತ್ತದೆ. ಇದಾದ ಬಳಿಕ ಮಧ್ಯಾಹ್ನ ವಿವಿಧ ಧಾರ್ಮಿಕ ಆಚರಣೆ ಜರುಗಲಿದೆ. ಈ ವೇಳೆ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ರಾತ್ರಿ ದೇವಿಯ ಹೂವಿನ ಕರಗ ಹೊರಡಲಿದ್ದು, ನಗರಾದ್ಯಂತ ಸಂಚಾರ ಮಾಡಿ ಭಕ್ತರಿಂದ ಪೂಜೆ ಸ್ವೀಕರಿಸಲಿದೆ. ಇದಾದ ಬಳಿಕ ಬುಧವಾರ ಬೆಳಗ್ಗೆ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ಕೊಂಡ ಹಾಯ್ದು ಬಳಿಕ ಅದ್ಧೂರಿ ಆಚರಣೆ ಮುಕ್ತಾಯ ಕಾಣಲಿದೆ.

ಇತರೆ ಕರಗಗಳು :

ಚಾಮುಂಡೇಶ್ವರಿ ಕರಗದ ರೀತಿಯಲ್ಲಿಯೇ ಇತರೆ ಕರಗಗಳ ಆಚರಣೆ ನಡೆಯಲಿದೆ. ಮಗ್ಗದ ಕೆರೆ ಮಾರಮ್ಮ, ಬಿಸಿಲು ಮಾರಮ್ಮ, ಭಂಡಾರಮ್ಮ, ಕೊಂಕಾಣಿದೊಡ್ಡಿ, ಐಜೂರು, ಗಾಂಧಿನಗರ ಆದಿಶಕ್ತಿ, ಮುತ್ತುಮಾರಮ್ಮ ಅಮ್ಮನವರ ಕರಗ ಮಹೋತ್ಸವ ಜರುಗಲಿದೆ. ಇದೇ ರೀತಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ.

ಮುಖ್ಯಮಂತ್ರಿಗಳಿಗೆ ಆಹ್ವಾನ :

ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮಂಗಳವಾರ ಸಂಜೆ ನಡೆಯಲಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಮಾಜಿ ಸದಸ್ಯ ಸಿ.ಎಂ. ಲಿಂಗಪ್ಪ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ.

ಬಾಡೂಟದ ಘಮಲು:

ಇನ್ನು ಕರಗ ಮಹೋತ್ಸವದ ಪ್ರಯುಕ್ತ ನಗರದೆಲ್ಲೆಡೆ ಮಂಗಳವಾರ ಹಾಗೂ ಬುಧವಾರ ಬಾಡೂಟ ಜೋರಾಗಿ ನಡೆಯಲಿದೆ. ಹಾಗಾಗಿ ನಗರವಾಸಿಗಳು ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಕರೆದು, ಬಾಡೂಟ ಉಣಬಡಿಸಲಿದ್ದಾರೆ.

ಮದ್ಯಪಾನ ನಿಷೇಧ:

ಚಾಮುಂಡೇಶ್ವರಿ ಹಾಗೂ ಇತರೆ ಕರಗ ಮಹೋತ್ಸವದ ಪ್ರಯುಕ್ತ ಅಹಿತಕರ ಘಟನೆ ಜರುಗದಂತೆ ತಡೆಯುವ ಸಲುವಾಗಿ ಜಿಲ್ಲಾಡಳಿತ ಸೋಮವಾರ ಮಧ್ಯರಾತ್ರಿ 12ರಿಂದ ಬುಧವಾರ ರಾತ್ರಿ 12ವರೆಗೆ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಮಧ್ಯಮಾರಾಟ ಮಾಡುವುದನ್ನು ನಿಷೇಧ ವಿಧಿಸಿದೆ.

ಬಿಗಿ ಬಂದೋಬಸ್ತ್ :

ಇನ್ನು ಕರಗ ಮಹೋತ್ಸವದ ಪ್ರಯುಕ್ತ ಬಂದೋಬಸ್ತ್ ನೀಡುವ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ಜರುಗದಂತೆ ತಡೆಯುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಿದೆ. ಇವರಿಗೆ ಗೃಹ ರಕ್ಷಣ ದಳದ ಸಿಬ್ಬಂದಿ ಸಾಥ್ ನೀಡಲಿದ್ದಾರೆ.

ಚಾಮುಂಡಿ ಕರಗ ಉತ್ಸವ; ರಸಮಂಜರಿ ಕಾರ್ಯಕ್ರಮ

ಇನ್ನು ನಗರದ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರ ನೇತೃತ್ವದಲ್ಲಿ ಸಂಗೀತ ಸಂಜೆ ಆಯೋಜನೆ ಮಾಡಲಾಗಿದೆ. ಸರ್ವಧರ್ಮ ಸಂದೇಶ ಸಾರುವ ದೇವರ ವಿದ್ಯುತ್ ಕಟೌಟ್ ಅನ್ನು ಅಳವಡಿಕೆ ಮಾಡಲಾಗಿದೆ. ಸುಮಾರು 20 ಸಾವಿರ ಜನ ಕುಳಿತು ಕಾರ್ಯಕ್ರಮ ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವೇದಿಕೆಯ ಆಕರ್ಷಣೆಯಾಗಿ ಚಿತ್ರ ನಟರಾದ ಡಾಲಿಧಂಜಯ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ದೃವ ಸರ್ಜಾ ಆಗಮಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ ನಿರೂಪಣೆ ಮಾಡಲಿದ್ದಾರೆ.

ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ಬಹು ದೊಡ್ಡ ಹಬ್ಬವಾಗಿದೆ. ಹಿಂದಿನಿಂದಲೂ ಎಲ್ಲ ಧರ್ಮಗಳಿಗೂ ಗೌರವ ಕೊಡುತ್ತಾ ಒಂದೇ ಎಂದು ಪಾಲನೆ ಮಾಡುತ್ತಾ ನಿಷ್ಟೆ, ಭಕ್ತಿಯನ್ನು ಸಮರ್ಪಣೆ ಮಾಡುತ್ತಾ ಬಂದಿದ್ದೇನೆ. ಮಂಗಳವಾರ ಸಂಜೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀ ಚಾಮುಂಡಿ ಉತ್ಸವ ರಾಮನಗರ - 2024 ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವಂತೆ ಮನವಿ ಮಾಡುತ್ತೇನೆ.

ಇಕ್ಬಾಲ್ ಹುಸೇನ್, ಶಾಸಕ, ರಾಮನಗರ ಕ್ಷೇತ್ರ.

ಆಕರ್ಷಕ ಆಟಿಕೆಗಳು!

ಪ್ರತಿ ವರ್ಷ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಮೆರಗು ಹೆಚ್ಚಿಸುವುದು ಆಟಿಕೆಗಳೇ ಆಗಿವೆ. ರಾಮನಗರದ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿ ಈಗಾಗಲೆ ಆಟಿಕೆಗಳನ್ನು ಅಳವಡಿಸಲಾಗಿದೆ. ದೊಡ್ಡವರಿಂದ ಹಿಡಿದು ಸಣ್ಣವರಿಗಾಗಿ ಹಲವು ಆಟಿಕೆಗಳನ್ನು ಹಾಕಲಾಗಿದೆ. ಜತೆಗೆ, ಪ್ರದರ್ಶನಕ್ಕೆ ಆಗಮಿಸುವ ಜನತೆಗೆ ಅನುಕೂಲವಾಗಲೆಂದು ಬಗೆ ಬಗೆ ತಿಂಡಿ ಸ್ಟಾಲ್ ನಿರ್ಮಾಣ ಮಾಡಲಾಗಿದೆ. ರಾಮನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಇದನ್ನು ಕಣ್ತುಂಬಿಕೊಳ್ಳಲು ಜನತೆ ಆಗಮಿಸುತ್ತಾರೆ.

ಶಾಸಕರಿಂದ ದೇವರಿಗೆ ಮಡಿಲಕ್ಕಿ

ದ್ಯಾವರಸೇಗೌಡನದೊಡ್ಡಿ ಶ್ರೀ ಚಾಮುಂಡೇಶ್ವರಿ ದೇವತೆ, ಕೊಂಕಾಣಿದೊಡ್ಡಿ ಆದಿಶಕ್ತಿ, ಗಾಂಧಿನಗರ ಆದಿಶಕ್ತಿ, ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ತೋಪ್‌ಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಟ್ರೂಪ್ಲೇನ್ ಬಂಡಿ ಮಹಾಂಕಾಳಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ದೇವಾಲಯಗಳಿಗೆ ಹರಿಸಿನ ಕುಂಕುಮ, ಸೀರೆ, ಬಳೆ, ವೀಳ್ಯದೆಲೆ, ಅಡಿಕೆ ಹೊಂಬಾಳೆ, ಮಡಿಲಕ್ಕಿ ಸಾಮಾನು, ಬಿಚ್ಚಾಲೆ, ಪಂಚ ಫಲಗಳನ್ನು ಒಳಗೊಂಡ ಪೂಜಾ ಸಾಮಗ್ರಿಗಳನ್ನು ಮರದ ಬುಟ್ಟಿಯಲ್ಲಿರಿಸಿ ದೇವತೆಗಳಿಗೆ ಅರ್ಪಿಸಿ ಕಾಣಿಕೆಯನ್ನು ನೀಡುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಮಡಿಲಕ್ಕಿ ಸಮರ್ಪಣೆ ಮಾಡಿದರು.