ಸಾರಾಂಶ
ಈ ಪೋರ್ಟಲ್ ಸೇವೆ ಪಡೆಯಲು ಬಳಕೆದಾರರು ಯಾವುದೇ ನೋಂದಣಿ ಶುಲ್ಕ ಅಥವಾ ಇತರೇ ಯಾವುದೇ ಶುಲ್ಕಗಳಿಲ್ಲದೆ ನೋಂದಾಯಿಸಿಕೊಳ್ಳಬಹುದು. ಇದು ಆರ್ಥಿಕವಾಗಿ ಹಿಂದುಳಿದ ವರ್ಗದವನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳಿಗೂ ನೆರವು ಒದಗಿಸಲಿದೆ.
ವಸಂತಕುಮಾರ ಕತಗಾಲ
ಕಾರವಾರ: ಇತ್ತೀಚೆಗೆ ಕೊಪ್ಪಳದ ಕನಕಗಿರಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಯುವ ರೈತರೊಬ್ಬರು ಮದುವೆಯಾಗಲು ಕನ್ಯೆ ಹುಡುಕಿಕೊಡುವಂತೆ ಅರ್ಜಿ ಸಲ್ಲಿಸಿರುವ ಸಂಗತಿ ಭಾರಿ ಸುದ್ದಿಯಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಂಡಿರುವ ಜಿಲ್ಲಾಡಳಿತ ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾಡಳಿತದ ಮೂಲಕ ಯುವ ರೈತರು, ಅಂಗವಿಕಲರು, ಎಚ್ಐವಿ ಪೀಡಿತರಿಗೆ ವಿವಾಹಕ್ಕೆ ಸೂಕ್ತ ವೇದಿಕೆ ಒದಗಿಸುವ ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.ಜಿಲ್ಲಾಡಳಿತದ ವೆಬ್ ಸೈಟ್ https://uttarakannada.nic.in/ ನಲ್ಲಿ ಜೀವನ ಸಂಗಮ ಎಂಬ ಪೋರ್ಟಲ್ ಆರಂಭಿಸಿಸಲಾಗಿದ್ದು, ಇದು ವಿವಾಹಕ್ಕೆ ವೇದಿಕೆ ಒದಗಿಸಿದೆ. ಜೀವನ ಸಂಗಮ ಪೋರ್ಟಲ್‌ಗೆ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಬಳಕೆದಾರರಿಗೆ ಅವರ ವಿವಾಹ ಸಂಬಂಧಗಳಲ್ಲಿ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಖಾತ್ರಿಪಡಿಸುವ ಜತೆಗೆ, ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ, ಸಂಬಂಧಗಳನ್ನು ಬಯಸುವ ವ್ಯಕ್ತಿಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.ಶುಲ್ಕವಿಲ್ಲ: ಈ ಪೋರ್ಟಲ್ ಸೇವೆ ಪಡೆಯಲು ಬಳಕೆದಾರರು ಯಾವುದೇ ನೋಂದಣಿ ಶುಲ್ಕ ಅಥವಾ ಇತರೇ ಯಾವುದೇ ಶುಲ್ಕಗಳಿಲ್ಲದೆ ನೋಂದಾಯಿಸಿಕೊಳ್ಳಬಹುದು. ಇದು ಆರ್ಥಿಕವಾಗಿ ಹಿಂದುಳಿದ ವರ್ಗದವನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳಿಗೂ ನೆರವು ಒದಗಿಸಲಿದೆ.
ಸುರಕ್ಷಿತ ಪೋರ್ಟಲ್: ಈ ಪೋರ್ಟಲ್ ಎಲ್ಲ ಬಳಕೆದಾರರಿಗೆ ಅತ್ಯಂತ ಸುರಕ್ಷಿತವಾಗಿದೆ. ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಅವರ ಗೌಪ್ಯತೆ ಮತ್ತು ಘನತೆಗೆ ಆದ್ಯತೆ ನೀಡಲಾಗಿದೆ. ವಿವಾಹವಾಗಲು ಸಲ್ಲಿಸುವ ಅರ್ಜಿಗಳನ್ನು ಮತ್ತು ಪ್ರೊಫೈಲ್‌ಗಳನ್ನು ವ್ಯಕ್ತಿಯು ವಾಸವಾಗಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸೇರಿದಂತೆ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಿಶೀಲಿಸುವರು. ಅರ್ಜಿದಾರರ ಪ್ರೊಫೈಲ್‌ಗಳಲ್ಲಿನ ನೈಜತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸುತ್ತಾರೆ. ವಿವಾಹವಾಗಲು ಅರ್ಜಿ ಸಲ್ಲಿಸುವ ವ್ಯಕ್ತಿಯ ಹಿನ್ನೆಲೆ, ವಿವರಗಳ ಬಗ್ಗೆ ವಿವಿಧ ಅಧಿಕಾರಿಗಳು ಖುದ್ದು ಸ್ಥಳ ಭೇಟಿ ಪರಿಶೀಲನೆ ನಡೆಸುವರು. ಅರ್ಹ ವ್ಯಕ್ತಿಗಳಿಗೆ ಮಾತ್ರ ಹೊಂದಾಣಿಕೆಯ ಮುಂದಿನ ಪ್ರಕ್ರಿಯೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗುವುದು.ಎಲ್ಲ ಧರ್ಮದವರಿಗೂ ಮುಕ್ತ: ಈ ಸೇವೆಯು ಎಲ್ಲ ಧರ್ಮಗಳ ವ್ಯಕ್ತಿಗಳಿಗೂ ಮುಕ್ತವಾಗಿದ್ದು, ಸಾರ್ವಜನಿಕರು ತಮ್ಮ ಧಾರ್ಮಿಕವಾ ಆದ್ಯತೆಗಳನ್ನು ಮ್ಯಾಚ್ ಮೇಕಿಂಗ್‌ಗೆ ನಿರ್ದಿಷ್ಟಪಡಿಸಲು ಅವಕಾಶ ನೀಡುವುದರ ಜತೆಗೆ, ತಮ್ಮದೇ ಆದ ಜಾತಿಯೊಳಗೆ ಹೊಂದಾಣಿಕೆಗಳನ್ನು ಆಯ್ಕೆ ಮಾಡಬಹುದು ಅಥವಾ ಅಂತರ್ಜಾತಿ ಆಯ್ಕೆಗಳನ್ನು ಆಯ್ಕೆಗೂ ಅವಕಾಶವಿದೆ. ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಮಗೆ ಇಚ್ಛಿಸುವ ಹೊಂದಾಣಿಕೆಯನ್ನು ಆಯ್ಕೆ ಮಾಡಬಹುದು.
ಪ್ರೋತ್ಸಾಹಧನ: ಜಿಲ್ಲೆಯ ಅರ್ಹ ಯುವಕ- ಯುವತಿಯರಿಗೆ ಮಾತ್ರ ವಿವಾಹ ಹೊಂದಾಣಿಕೆಗೆ ವೇದಿಕೆ ಒದಗಿಸಲಿದೆ. ಇಲ್ಲಿ ಅರ್ಜಿ ಸಲ್ಲಿಸುವವರಿಗೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಡಲಾಗುವುದು. ಅಂತರ್ಜಾತಿ ವಿವಾಹವಾಗುವವರಿಗೆ ಮತ್ತು ಅಂಗವಿಕಲರನ್ನು ವಿವಾಹವಾಗುವವರಿಗೆ ಸರ್ಕಾರದಿಂದ ದೊರೆಯುವ ಪ್ರೋತ್ಸಾಹಧನ ಸೇರಿದಂತೆ ಎಲ್ಲ ರೀತಿಯ ನೆರವು ಒದಗಿಸಲಾಗುವುದು. 10ಕ್ಕಿಂತ ಹೆಚ್ಚು ಜೋಡಿಗಳು ಒಪ್ಪಿಗೆ ನೀಡಿದಲ್ಲಿ ವಿವಿಧ ಸಂಘ- ಸಂಸ್ಥೆಗಳ ನೆರವಿನಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಚಿಂತನೆ ಇದೆ. ಜಿಲ್ಲೆಯ ಅನಾಥಾಶ್ರಮಗಳಲ್ಲಿನ ಯುವತಿಯರಿಗೂ ಈ ಪೋರ್ಟಲ್ ಮೂಲಕ ಸೂಕ್ತ ಜೀವನ ಸಂಗಾತಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.