ಕಾವೇರಿ ಒಡಲು ತುಂಬಿದ ಕನ್ನಂಬಾಡಿ ಅಣೆಕಟ್ಟೆ : 3ನೇ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್‌ಎಸ್‌ಗೆ ಬಾಗಿನ

| Published : Jul 29 2024, 01:01 AM IST / Updated: Jul 29 2024, 05:35 AM IST

ಕಾವೇರಿ ಒಡಲು ತುಂಬಿದ ಕನ್ನಂಬಾಡಿ ಅಣೆಕಟ್ಟೆ : 3ನೇ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್‌ಎಸ್‌ಗೆ ಬಾಗಿನ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಒಡಲು ತುಂಬಿದ ಕನ್ನಂಬಾಡಿ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಡಿ.ದೇವರಾಜ ಅರಸು ಅವರು ಪ್ರಾರಂಭಿಸಿದರು. 1979ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.

  ಮಂಡ್ಯ : ರೈತರ ಜೀವನಾಡಿ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸೋಮವಾರ ಬಾಗಿನ ಅರ್ಪಿಸಲಿದ್ದಾರೆ.

ಇಂದು ಬೆಳಗ್ಗೆ 10.30ಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಆರ್.ಎಸ್.ನಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಬೆಳಗ್ಗೆ 11 ಗಂಟೆಗೆ ಬಾಗಿನ ಅರ್ಪಿಸುವರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡು ಬಾರಿ, ಉಪ ಮುಖ್ಯಮಂತ್ರಿಯಾಗಿ ಒಂದು ಬಾರಿ ಸೇರಿ 3ನೇ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ. ಕಳೆದ ವರ್ಷ ಭೀಕರ ಬರಗಾಲದಿಂದ ಕನ್ನಂಬಾಡಿ ಜಲಾಶಯದ ಭರ್ತಿಯಾಗದ ಕಾರಣ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ.

2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರು ಆಗಲೂ ಬಾಗಿನ ಅರ್ಪಿಸುವ ಭಾಗ್ಯ ಒದಗಿ ಬಂದಿರಲಿಲ್ಲ. 2014ರಲ್ಲಿ 123 ಅಡಿಗೆ ತಲುಪಿದ್ದ ಕೃಷ್ಣರಾಜಸಾಗರ ಜಲಾಶಯ ಆಗಲೂ ತುಂಬಿರಲಿಲ್ಲ. ಬಳಿಕ ಹೇಮಾವತಿ ಜಲಾಶಯದಿಂದ ಒಂದು ಅಡಿಗೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಿ ಕನ್ನಂಬಾಡಿ ಅಣೆಕಟ್ಟೆ ತುಂಬಿಸಿ ಬಾಗಿನ ಅರ್ಪಿಸಿದರು.

ನಂತರ ಜಲಾಶಯ ತುಂಬದ ಹಿನ್ನೆಲೆಯಲ್ಲಿ 2015, 16,17ರಲ್ಲೂ ಬಾಗಿನ ಅರ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರ ನಡೆಸಿದ್ದರೂ ಕೇವಲ ಎರಡು ಬಾರಿ ಮಾತ್ರ ಬಾಗಿನ ಅರ್ಪಿಸಲು ಸಾಧ್ಯವಾಗಿತ್ತು.

ಜೆ.ಎಚ್.ಪಟೇಲ್ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಆರ್ ಎಸ್ ಭರ್ತಿಯಾಗಿತ್ತು. ಕಾರಣಾಂತರಗಳಿಂದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಬಾಗಿನ ಅರ್ಪಿಸುವ ಕಾರ್‍ಯಕ್ರಮಕ್ಕೆ ಬಂದಿರಲಿಲ್ಲ. ಅಂದು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.

ಅರಸು ಅವರಿಂದ ಪ್ರಾರಂಭ:

ಕಾವೇರಿ ಒಡಲು ತುಂಬಿದ ಕನ್ನಂಬಾಡಿ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಡಿ.ದೇವರಾಜ ಅರಸು ಅವರು ಪ್ರಾರಂಭಿಸಿದರು. 1979ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.

ನಂತರ 1980ರಲ್ಲಿ ಮುಖ್ಯಮಂತ್ರಿಯಾದ ಡಿ.ಗುಂಡೂರಾವ್ ಅವರು ಈ ಪರಂಪರೆ ಮುಂದುವರಿಸಿದರು. ನಂತರ ಎರಡು ಬಾರಿ ರಾಮಕೃಷ್ಣ ಹೆಗಡೆ, ಎಂ.ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಎನ್. ಧರ್ಮಸಿಂಗ್, ವೀರೇಂದ್ರಪಾಟೀಲ್, ಎಸ್. ಬಂಗಾರಪ್ಪ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ 1988ರಲ್ಲಿ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯ ಅವರೂ ಸಹ ಬಾಗಿನ ಸಲ್ಲಿಸಿದವರಾಗಿದ್ದಾರೆ.

ಬಾಗಿನಕ್ಕೆ ಜಿಲ್ಲಾಡಳಿದ ಸಿದ್ಧತೆ:

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಬಾಗಿನ ಅರ್ಪಿಸುವ ಸ್ಥಳದಲ್ಲಿ ಕಟಕಟೆಗಳನ್ನು ಕಟ್ಟಲಾಗಿದೆ. ಶಾಮಿಯಾನ ಹಾಕಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ವೈದಿಕರ ತಂಡ ಈಗಾಗಲೇ ಪೂಜಾ ಹಾಗೂ ಬಾಗಿನದ ಸಾಮಗ್ರಿಗಳನ್ನು ಸಿದ್ಧಪಡಿಸಿದೆ.

ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಪೂಜಾ ಸ್ಥಳವನ್ನು ತಳಿರು ತೋರಣ ಹಾಗೂ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಮತ್ತು ರೇ, ಖಾತೆ ಸಚಿವ ಕೆ.ವೆಂಕಟೇಶ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಮೈಸೂರು ಜಂಗಲ್ ಲಾಡ್ಜ್ ಅಧ್ಯಕ್ಷ ಸಿ. ಅನಿಲ್‌ಕುಮಾರ್, ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಸಂಸದರಾದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸಿಎಂ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ನಿಗಮದಿಂದ ಅಣೆಕಟ್ಟೆ ಮೇಲ್ಬಾಗದಲ್ಲಿನ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು, ಕನ್ನಡ ಬಾವುಟ ಹಾಗೂ ತೋರಣಗಳಿಂದ ಸಿಂಗರಿಸುವ ಕೆಲಸ ಮಾಡಲಾಗಿದೆ. ಜರ್ಮನ್ ಟೆಂಟ್ ನಿಂದ ವೇದಿಕೆ ಸಿದ್ದತಾ ಕಾರ್ಯ ನಡೆದಿದೆ.

ಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳನ್ನು ಹೊರತುಪಡಿಸಿ ಕಾರ್‍ಯಕರ್ತರು ಮತ್ತು ಇತರರಿಗೆ ಅಣೆಕಟ್ಟೆ ಮೇಲ್ಬಾಗಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.