ಸಾರಾಂಶ
ಅಜೀಜಅಹ್ಮದ್ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಅಭಿವೃದ್ಧಿಯ ನೆಪದಲ್ಲಿ ಹು-ಧು ಮಹಾನಗರದಲ್ಲಿ ಗಿಡಮರಗಳ ಮಾರಣಹೋಮ ನಡೆದು ವರ್ಷಗಳೇ ಕಳೆದಿವೆ. ಪಾಲಿಕೆಯಿಂದ ಗಿಡನೆಡುವ ಕಾರ್ಯವಂತೂ ಆಗುತ್ತಿಲ್ಲ. ಇದೀಗ ಇರುವ ಅಳಿದುಳಿದ ಮರಗಳ ಸುತ್ತಲೂ ಕಾಂಕ್ರಿಟ್, ಫೇವರ್ಸ್ ಅಳವಡಿಸಿ ಗಿಡಗಳ ಉಸಿರೇ ನಿಲ್ಲಿಸುವ ಕೆಲಸ ನಡೆದಿದೆ!
ರಸ್ತೆಯ ಅಕ್ಕಪಕ್ಕದಲ್ಲಿರುವ ಬೃಹದಾಕಾರದ ಸುಂದರ ಮರಗಳಿಗೆ ಹೊಂದಿಕೊಂಡೇ ಫುಟ್‌ಪಾತ್ ನಿರ್ಮಿಸಲಾಗಿದೆ. ಯಾವುದೇ ಒಂದು ಮರವಿದ್ದರೆ ಅದಕ್ಕೆ ನೀರು ಇಂಗಲು, ಬೆಳವಣಿಗೆಗೆ ಸಹಕಾರಿಯಾಗಲು ಅದರ ಸುತ್ತಲೂ ಒಂದು ಅಡಿಯಷ್ಟಾದರೂ ಜಾಗ ಬಿಡಬೇಕು. ಆದರೆ, ಅದು ಆಗಿಲ್ಲ.ಮಹಾನಗರದ ಸೌಂದರ್ಯ ಹೆಚ್ವಿಸುವ ನಿಟ್ಟಿನಲ್ಲಿ ಪಾಲಿಕೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ರಸ್ತೆ, ಫುಟ್‌ಪಾತ್‌ಗಳನ್ನು ಕಾಂಕ್ರಿಟೀಕರಣಗೊಳಿಸಿದೆ. ಇದರಿಂದ ಮರಗಳು ಮತ್ತು ಅದರ ಬೇರುಗಳಿಗೆ ಒಂದು ಹನಿ ನೀರು ಸಿಗದಂತಾಗಿ ಉಸಿರು ಕಟ್ಟುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲಕ್ಕೆ ಅವುಗಳು ಶಕ್ತಿಹೀನವಾಗಿ ಧರೆಗುರುಳುವ ಹಂತಕ್ಕೆ ತಲುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕ್ರಮಕ್ಕೆ ಹಿಂದೇಟುಮಹಾನಗರದ ಸಾವಿರಾರು ಮರಗಳು ಕಾಂಕ್ರಿಟ್ ಹಾಗೂ ಫೇವರ್ಸ್ ಒತ್ತಡಕ್ಕೆ ಸಿಲುಕಿ ನಾಶವಾಗುತ್ತಿರುವ ಬಗ್ಗೆ ಹಾಗೂ ಮರದ ಸುತ್ತಲು ಕಾಂಕ್ರಿಟ್ ತೆಗೆಯುವಂತೆ ಪರಿಸರ ಪ್ರೇಮಿಗಳು ಪಾಲಿಕೆ ಆಯುಕ್ತರಿಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಮನವಿ ಸಲ್ಲಿಸಿದ ವೇಳೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ, ಈ ವರೆಗೂ ಕ್ರಮವಾಗುತ್ತಿಲ್ಲ.
ಎಲ್ಲೆಲ್ಲಿ ಈ ಸಮಸ್ಯೆ?ಧಾರವಾಡದ ರೈಲ್ವೆ ನಿಲ್ದಾಣದ ಹತ್ತಿರದ ಪ್ರದೇಶ, ಜ್ಯುಬಿಲಿ ವೃತ್ತ, ಸಪ್ತಾಪುರ ಬಾವಿ, ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಮುತ್ತ, ಮಂಗಳವಾರ ಪೇಟೆ, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ, ಕೋರ್ಟ್ ಸರ್ಕಲ್, ನಿಲಿಜಿನ್ ರಸ್ತೆ, ವಿಜಯ ನಗರ ಸೇರಿದಂತೆ ಹಲವೆಡೆ ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಸಿಮೆಂಟ್, ಫೇವರ್ಸ್ ಅಳವಡಿಸಲಾಗಿದೆ.
ಸಮೀಕ್ಷೆಈ ಹಿಂದೆ ಸುರೇಶ ಇಟ್ನಾಳ ಅವರು ಪಾಲಿಕೆ ಆಯುಕ್ತರಾಗಿದ್ದ ವೇಳೆ ಇಂತಹ ಮರಗಳ ಕುರಿತು ಸಮೀಕ್ಷೆ ಕೈಗೊಂಡು 2837 ಗಿಡಗಳ ಗುರುತು ಮಾಡಲಾಗಿತ್ತು. ನಂತರ ಕಾರ್ಯಾಚರಣೆ ಕೈಗೊಂಡು 1600 ಗಿಡಗಳಿಗೆ ಹಾಕಲಾಗಿದ್ದ ಕಾಂಕ್ರಿಟ್, ಫೇವರ್ಸ್ ತೆರವುಗೊಳಿಸಿ ಗಿಡಗಳಿಗೆ ನೀರು ಇಂಗಲು ವ್ಯವಸ್ಥೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಇದು ನಿಂತುಹೋಯಿತು. ಇದನ್ನು ಮುಂದುವರಿಸುವಂತೆ ಆಯುಕ್ತರಿಗೆ ನೂರಾರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪರಿಸರ ಪ್ರೇಮಿ ಡಾ. ವೀಣಾ ತೊಣಪಿ.
ಮನವಿಕಾಂಕ್ರಿಟ್, ಫೇವರ್ಸ್‌ನಿಂದ ಹಾಳಾಗುತ್ತಿರುವ ಗಿಡಗಳನ್ನು ರಕ್ಷಿಸಲು ವಿವಿಧ ಪರಿಸರ ಸ್ನೇಹಿ ಸಂಘಟನೆಗಳು, ಪರಿಸರ ಪ್ರೇಮಿಗಳ ನೇತೃತ್ವದಲ್ಲಿ ಹಲವು ಬಾರಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ವರೆಗೂ ಪಾಲಿಕೆ ಆಯುಕ್ತರು ಕ್ರಮಕೊಗೊಂಡಿಲ್ಲ.ಲಿಂಗರಾಜ ಧಾರವಾಡಶೆಟ್ಟರ, ಪರಿಸರ ಪ್ರೇಮಿ
ತೆರವಿಗೆ ಕ್ರಮಆದಷ್ಟು ಬೇಗ ಇಂತಹ ಗಿಡ-ಮರಗಳ ಸಮೀಕ್ಷೆ ಕೈಗೊಂಡು ಎಲ್ಲಿ ಕಾಂಕ್ರಿಟ್‌ನಿಂದ ಮುಚ್ಚಿವೆಯೋ ಅಂತಹವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ತಿಂಗಳ ಕೊನೆಗೆ ಪಾಲಿಕೆಯಿಂದ ಲಕ್ಷ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ