ಬಲವಂತದ ಬಂದ್‌, ವಾಹನ. ಆಸ್ತಿ ಹಾನಿಗೆ ಅವಕಾಶವಿಲ್ಲ- ಎಸ್‌ಪಿ ಎಚ್ಚರಿಕೆ

| Published : Mar 22 2025, 02:02 AM IST

ಸಾರಾಂಶ

ಕನ್ನಡ ಒಕ್ಕೂಟಗಳ ಅಧ್ಯಕ್ಷ ವಾಟಾಳ್ ನಾಗರಾಜ, ಸಾ.ರಾ.ಗೋವಿಂದ್ ಮತ್ತು ಇತರೆ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಮಾ.22ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ದಾವಣಗೆರೆ ನಗರದಲ್ಲೂ ಕೆಲ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.

- ಟೈರ್‌ ಸುಡುವಂತಿಲ್ಲ, ಸುಳ್ಳು ಸುದ್ದಿ ಹರಡುವಂತಿಲ್ಲ । ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ತಪ್ಪಿದ್ದಲ್ಲ: ಉಮಾ ಪ್ರಶಾಂತ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಒಕ್ಕೂಟಗಳ ಅಧ್ಯಕ್ಷ ವಾಟಾಳ್ ನಾಗರಾಜ, ಸಾ.ರಾ.ಗೋವಿಂದ್ ಮತ್ತು ಇತರೆ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಮಾ.22ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ದಾವಣಗೆರೆ ನಗರದಲ್ಲೂ ಕೆಲ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.

ಎಂಇಎಸ್‌, ಮರಾಠಿಗರು ಕರ್ನಾಟಕದ ಬಸ್‌ ಚಾಲಕರು, ನಿರ್ವಾಹಕರ ಮೇಲೆ ದಾಳಿ ಮಾಡಿದ ಪ್ರಕರಣ ಸಮಗ್ರ ತನಿಖೆ ನಡೆಸಬೇಕು, ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್‌ ಕರೆ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಯಾರೂ ಉಲ್ಲಂಘನೆ ಮಾಡುವಂತಿಲ್ಲ ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಒತ್ತಾಯ ಪೂರ್ವಕವಾಗಿ ಅಥವಾ ಬಲವಂತವಾಗಿ ಯಾವುದೇ ಶಾಲಾ-ಕಾಲೇಜು, ಸರ್ಕಾರಿ-ಖಾಸಗಿ ಸಂಸ್ಥೆಗಳನ್ನು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ. ಸಾರ್ವಜನಿಕ ಜನಜೀವನಕ್ಕೆ, ವಾಹನ, ಆಸ್ತಿಗಳ ನಾಶ ಮಾಡುವಂತಿಲ್ಲ. ರಸ್ತೆ ತಡೆ, ವಾಹನ ಅಡ್ಡಗಟ್ಟುವುದಕ್ಕೆ ಅವಕಾಶ ಇಲ್ಲ. ತುರ್ತು ಸೇವೆ ಮತ್ತು ಅಗತ್ಯ ವಸ್ತುಗಳ ಸಾಗಾಣಿಕೆ ಅಡ್ಡಿಪಡಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ಬಂದ್ ವೇಳೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲು ಮತ್ತು ಯಾವುದೇ ಪ್ರತಿಕೃತಿ ದಹಿಸಲು ಅವಕಾಶ ಇಲ್ಲ. ಬಂದ್ ಹೆಸರಿನಲ್ಲಿ ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ತಪ್ಪಿದ್ದಲ್ಲ. ಬಂದ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಹಾಕುವುದು, ಅವುಗಳನ್ನು ಶೇರ್ ಮಾಡುವುದಾಗಲೀ ಕಂಡುಬಂದರೆ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ, ಶಾಂತಿ, ಸೌಹಾರ್ದದಿಂದ ಪ್ರತಿಭಟಿಸಬಹುದು. ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಾಣಿ 112ಗೆ ಕರೆ ಮಾಡಬೇಕು. ಸ್ಥಳೀಯ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಬೇಕು. ಬಂದ್ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಶಸ್ತ್ರ ತುಕಡಿ ಹಾಗೂ ಬಂದ್ ವೇಳೆ ನಗರದಲ್ಲಿ ಕಣ್ಗಾವಲಿಗಾಗಿ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಅವರು ತಿಳಿಸಿದ್ದಾರೆ.

- - - -21ಕೆಡಿವಿಜಿ3: ಉಮಾ ಪ್ರಶಾಂತ