ಸಾರಾಂಶ
ಕನಕಪುರ: ಬಡವರ ಪಾಲಿನ ಸಂಜೀವಿನಿ ಆಗಬೇಕಿದ್ದ ತಾಯಿ-ಮಕ್ಕಳ ಆಸ್ಪತ್ರೆ ಸಮಸ್ಯೆಗಳ ಆಗರವಾಗಿದೆ ಎಂದು ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ದಿಶಾ ಸಮಿತಿ ಸದಸ್ಯೆ ಜಿ.ಪಿ.ಶೋಭಾ ಆರೋಪಿಸಿದರು.ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಗರ್ಭಿಣಿಯರು ಮತ್ತು ಬಾಣಂತಿಯರ ಯೋಗ ಕ್ಷೇಮ ವಿಚಾರಿಸುವ ವೇಳೆ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿ ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.
ತಾಲೂಕಿನಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನು ಸುಧಾಮೂರ್ತಿ ಅವರು ಇನ್ಪೋಸಿಸ್ ಪ್ರತಿಷ್ಠಾನದ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಒಬ್ಬ ಪ್ರಸೂತಿ ಮತ್ತು ಒಬ್ಬ ಮಕ್ಕಳ ತಜ್ಞ ವೈದ್ಯರು ಮಾತ್ರ ಇದ್ದು, ಸಿಬ್ಬಂದಿ ಹಾಗೂ ಶೂಶ್ರೂಷಕಿಯರ ಕೊರತೆಯಿಂದ ಗರ್ಭಿಣಿಯರು ಮತ್ತು ತಾಯಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುಚಂಂತಾಗಿದೆ. ಕೆಲ ಸಂದರ್ಭಗಳಲ್ಲಿ ಗರ್ಭಿಣಿಯರನ್ನು ಹಾರೋಹಳ್ಳಿ ಬಳಿಯ ದಯಾನಂದ ಸಾಗರ್ ಮತ್ತು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅತ್ಯಾಧುನಿಕ ಆಸ್ಪತ್ರೆಗೆ ಕನಿಷ್ಠ ಮೂತ್ತಾರು ಸಿಬ್ಬಂದಿ ಅವಶ್ಯಕತೆ ಇದೆ. ಕೇವಲ ಏಳು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಗರ್ಭಿಣಿಯರು ಮತ್ತು ತಾಯಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ನಾಲ್ಕರಿಂದ ಐದು ಗರ್ಭಿಣಿಯರು ಹೆರಿಗೆಗೆ ಬರುತ್ತಿದ್ದು, ವೈದ್ಯರ ಕೊರತೆಯಿಂದ ಚಿಕಿತ್ಸೆ ವಿಳಂಬವಾಗಿ ತಾಯಿ, ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಂದು ಆರೋಪಿಸಿದರು.
ಗ್ರಾಮೀಣ ಭಾಗದ ಬಡವರು ನಗರದ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಾದರೆ ಸೂಕ್ತ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗೆ ಹೋಗಲು ಹಣವಿಲ್ಲದೆ ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಜ್ಞರ ಕೊರತೆ ಇದ್ದು, ಗುತ್ತಿಗೆ ಆಧಾರದ ಮೇಲೆ ಒಬ್ಬರನ್ನು ನೇಮಿಸಲಾಗಿದೆ. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಕೆಲವೊಮ್ಮೆ ಕರೆಸಿಕೊಳ್ಳುವಂತ ದುಸ್ಥಿತಿ ಎದುರಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿ, ಬಾಣಂತಿ- ಮಗುವಿನ ಜೀವ ಕಾಪಾಡುವಂತೆ ಆಗ್ರಹಿಸಿದರು.ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ಶಶಿಧರ್, ಮಕ್ಕಳ ತಜ್ಞ ಡಾ.ವೆಂಕಟೇಶ್, ಪ್ರಸೂತಿ ತಜ್ಞೆ ಡಾ.ದಾಕ್ಷಾಯಿಣಿ, ದಿಶಾ ಸಮಿತಿ ಸದಸ್ಯ ಡಿ.ಶ್ರೀನಿವಾಸ್, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಕೋಟ್......ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಪ್ರತಿದಿನ ನಾಲ್ಕರಿಂದ ಐವರು ಗರ್ಭಿಣಿಯರು ಹೆರಿಗಾಗಿ ಬರುತ್ತಾರೆ. ವೈದ್ಯರ ಕೊರತೆಯಿಂದ ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಹೆರಿಗೆ ಸೌಲಭ್ಯ ಲಭ್ಯವಾಗದೆ ಮಕ್ಕಳು, ಬಾಣಂತಿಯರು ಆರೋಗ್ಯ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಸರ್ಕಾರ ಕೂಡಲೇ ಅಗತ್ಯ ವೈದ್ಯರು, ಸಿಬ್ಬಂದಿ ನೇಮಿಸಬೇಕು.
-ಜಿ.ಪಿ.ಶೋಭಾ, ದಿಶಾ ಸಮಿತಿ ಸದಸ್ಯೆಕೆ ಕೆ ಪಿ ಸುದ್ದಿ 03:
ಕನಕಪುರದ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ದಿಶಾ ಸಮಿತಿ ಸದಸ್ಯರಾದ ಜಿ.ಪಿ.ಶೋಭಾ ಹಾಗೂ ಡಿ.ಶ್ರೀನಿವಾಸ್ ಭೇಟಿ ನೀಡಿ ಆಸ್ಪತ್ರೆಯಲ್ಲಿ ಸೌಲಭ್ಯಗಳು, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಪರಿಶೀಲಿಸಿದರು.