ಸಾರಾಂಶ
ಜೈ ಭೀಮ್ ಯುವ ಸಂಘದ ಕಾರ್ಯಕರ್ತರು ಶನಿವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಮೈಸೂರು ಉದಯಗಿರಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಗಲಾಟೆ ನಡೆಸಿದ ಜಿಹಾದಿ ಮನಸ್ಥಿತಿಯವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಜೈ ಭೀಮ್ ಯುವ ಸಂಘದ ಕಾರ್ಯಕರ್ತರು ಶನಿವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಿದ ಉದಯಗಿರಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಜಿಹಾದಿ ಮನಸ್ಸಿನ ಯುವಕರು ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಿರುವುದು ಖಂಡನೀಯ. ಪೊಲೀಸ್ ವಶದಲ್ಲಿರುವ ವ್ಯಕ್ತಿಯನ್ನು ತಮಗೆ ಒಪ್ಪಿಸುವಂತೆ ಆಕ್ರೋಶಗೊಂಡ ಜಿಹಾದಿ ಗುಂಪು ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಜನರಿಗೆ ರಕ್ಷಣೆ ನೀಡುವ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಜತೆಗೆ ಡಿಸಿಪಿ ವಾಹನದ ಮೇಲೆ ಕಲ್ಲು ತೋರಾಟ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬೆಂಗಳೂರಿನ ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಘಟನೆಯ ವೇಳೆ ಪೊಲೀಸ್ ಠಾಣೆಗೆ ನುಗ್ಗಿ ದುಷ್ಕೃತ್ಯ ನಡೆಸಿದ್ದರು. ಜತೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಕಾಂಪೌಂಡ್ ಒಳಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಎಲ್ಲ ಘಟನೆಗಳು ನಡೆದರೂ ಸರ್ಕಾರಗಳು ಕ್ರಮವಹಿಸದೇ ಇರುವುದು ಖಂಡನೀಯ. ಕೂಡಲೇ ತಪ್ಪಿತಸ್ಥರ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ವಿಶ್ವನಾಥ ಪೂಜಾರಿ, ವಿಶ್ವನಾಥ ಬೂದುರ, ಪರಶುರಾಮ ದಾವಣಗೇರಿ, ರಾಜು ತೇರದಾಳ, ನಾಗರಾಜ ಅಂಬಿಗೇರ ಸೇರಿದಂತೆ ಹಲವರಿದ್ದರು.