ಭಗೀರಥ ಭವನ ಕಾಮಗಾರಿಗೆ ಅನುದಾನ ನೀಡಲು ಒತ್ತಾಯ

| Published : Mar 18 2024, 01:49 AM IST

ಸಾರಾಂಶ

ಉಪ್ಪಾರ ಸಮಾಜದ ಜೊತೆಗೆ ಇತರೆ ಸಮಾಜದ ಭವನಗಳನ್ನು ನಿರ್ಮಾಣ ಮಾಡಲು ಅಗತ್ಯ ಅನುದಾನವನ್ನು ಈ ಹಿಂದೆ ಎಸ್.ಭೀಮನಾಯ್ಕ ಒದಗಿಸಿದ್ದರು

ಹಗರಿಬೊಮ್ಮನಹಳ್ಳಿ: ಪಟ್ಟಣದ ಭಗೀರಥ ಭವನದ ಮುಂದುವರಿದ ಕಾಮಗಾರಿಗೆ ₹೮೦ ಲಕ್ಷ ಅನುದಾನ ಕಲ್ಪಿಸುವಂತೆ ಒತ್ತಾಯಿಸಿ ಉಪ್ಪಾರ ಸಮಾಜದ ಪದಾಧಿಕಾರಿಗಳು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ನೇತೃತ್ವದಲ್ಲಿ ನಿಯೋಗ ತೆರಳಿ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಿದರು.

ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ನೇತೃತ್ವ ವಹಿಸಿ ಮಾತನಾಡಿ, ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಮುಂದುವರಿದ ಭಗೀರಥ ಭವನದ ಕಾಮಗಾರಿಗೆ ಅನುದಾನ ಒದಗಿಸಬೇಕು. ಈಗಾಗಲೇ ಭವನದ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಶಾಸಕರಾಗಿದ್ದ ವೇಳೆ ತಾಲೂಕು ಭಗೀರಥ ಭವನ ನಿರ್ಮಾಣಕ್ಕೆ ₹೬೫ ಲಕ್ಷ ಅನುದಾನ ಒದಗಿಸಿದ್ದೇನೆ ಎಂದು ತಿಳಿಸಿದರು.ಸಮಾಜದ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ನಂದಿಬಂಡಿ ಸೋಮಣ್ಣ ಮಾತನಾಡಿ, ಉಪ್ಪಾರ ಸಮಾಜದ ಜೊತೆಗೆ ಇತರೆ ಸಮಾಜದ ಭವನಗಳನ್ನು ನಿರ್ಮಾಣ ಮಾಡಲು ಅಗತ್ಯ ಅನುದಾನವನ್ನು ಈ ಹಿಂದೆ ಎಸ್.ಭೀಮನಾಯ್ಕ ಒದಗಿಸಿದ್ದರು ಎಂದು ತಿಳಿಸಿದರು.ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಗುಂಡ್ರು ಹನುಮಂತಪ್ಪ ಸಚಿವರಿಗೆ ಮನವಿ ಸಲ್ಲಿಸಿದರು.ಸಚಿವ ಶಿವರಾಜ್ ತಂಗಡಗಿ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ, ಉಪ್ಪಾರ ಸಮಾಜದ ಭವನ ನಿರ್ಮಾಣಕ್ಕೆ ತಕ್ಷಣವೇ ₹೮೦ ಲಕ್ಷ ಮಂಜೂರು ಮಾಡಿದ್ದೇವೆ. ಈ ಕುರಿತಂತೆ ಇಲಾಖೆಯ ಮುಖ್ಯಕಾರ್ಯದರ್ಶಿಗೆ ತಕ್ಷಣವೇ ಆದೇಶ ಪತ್ರ ಹೊರಡಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸಮಾಜದ ಕಾರ್ಯದರ್ಶಿ ಈಶಪ್ಪ, ಪುರಸಭೆ ಸದಸ್ಯ ಬಾಳಪ್ಪ, ಮುಖಂಡರಾದ ಟಿ.ಬಾಲಪ್ಪ, ಮುದುಕಪ್ಪ, ಹನುಮಂತಪ್ಪ ಇದ್ದರು.