ಸಾರಾಂಶ
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಸೋಮವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಸೋಮವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಲಿದೆ.
ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಕೋಲಾರ ಜಿಲ್ಲೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಅವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್‌ಗೆ ಕೇವಲ ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಮಾತ್ರ ಬಿಟ್ಟು ಕೊಟ್ಟು ಕೋಲಾರ ಕ್ಷೇತ್ರವನ್ನು ಬಿಜೆಪಿ ತಾನೇ ಉಳಿಸಿಕೊಂಡಿದೆ ಎಂಬ ವದಂತಿ ಹಬ್ಬಿತ್ತು.
ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಹಲವು ಜೆಡಿಎಸ್ ಮುಖಂಡರು ಆಕ್ರೋಶಗೊಂಡು ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಹೀಗಾಗಿ, ಸೋಮವಾರ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸೋಣ ಎಂಬುದನ್ನು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಸ್ಪರ್ಧಿಸಲು ಬಯಸಿದ್ದರೂ ಆ ಕ್ಷೇತ್ರವನ್ನೇ ಜೆಡಿಎಸ್‌ಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.