ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ: ಹೇಮಲತಾ ನಾಯಕ

| Published : Apr 21 2024, 02:15 AM IST

ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ: ಹೇಮಲತಾ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಸಮುದಾಯವೊಂದರ ತುಷ್ಟೀಕರಣ ನಡೆಸುತ್ತಿದ್ದು, ನೇಹಾ ಕೊಲೆ ಪ್ರಕರಣದಲ್ಲಿಯೂ ಅದನ್ನೇ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಸಮುದಾಯವೊಂದರ ತುಷ್ಟೀಕರಣ ನಡೆಸುತ್ತಿದ್ದು, ನೇಹಾ ಕೊಲೆ ಪ್ರಕರಣದಲ್ಲಿಯೂ ಅದನ್ನೇ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನೇಹಾ ಕೊಲೆ ಪ್ರಕರಣದಲ್ಲಿ ಕಠಿಣ ಶಿಕ್ಷೆ ಕೈಗೊಳ್ಳುವ ಮೂಲಕ ಆರೋಪಿಯ ಹೆಡೆಮುರಿ ಕಟ್ಟಬೇಕಾಗಿತ್ತು. ಆದರೆ, ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಇದು ವೈಯಕ್ತಿಕ ವಿಷಯವಾಗಿರಬಹುದು ಮತ್ತು ಗೃಹ ಸಚಿವರು ಪ್ರೇಮ ಪ್ರಕರಣ ಎಂದು ಉಡಾಫೆಯಾಗಿ ಹೇಳಿದ್ದಾರೆ. ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಆರ್ಥಿಕ ಅಪರಾಧದಲ್ಲಿ 9ನೇ ಸ್ಥಾನ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 3ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ಜನರಿಗೆ ಭದ್ರತೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವೈಫಲ್ಯ ಪ್ರಶ್ನಿಸಿದ 20ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿ ರಾಜ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ನಾರಿಶಕ್ತಿ ಸಮ್ಮಾನ್ ಯೋಜನೆ ರೂಪಿಸುತ್ತಿದ್ದರೆ, ರಾಜ್ಯದ ಹಿರಿಯ ಕಾಂಗ್ರೆಸ್ಸಿಗ ಶ್ಯಾಮನೂರು ಶಿವಶಂಕರಪ್ಪ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರಬೇಕು ಎಂದು ಮಹಿಳಾ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಪ್ರತಿ ಕ್ಷೇತ್ರದಲ್ಲಿ ಜನ ಬಿಜೆಪಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಟೀಕಿಸುವಾಗ ಮಹಿಳೆಯರು ಹಾದಿ ತಪ್ಪಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಒಪ್ಪಲ್ಲ. ಅವರು ಬಾಯಿ ತಪ್ಪಿ ಅಂದಿರಬಹುದು. ಆದರೆ ಗ್ಯಾರಂಟಿ ಯೋಜನೆಯಿಂದ ಎಷ್ಟೋ ಕುಟುಂಬಗಳಲ್ಲಿ ಒಡಕು ಬಂದಿದೆ ಎಂದರು.

ಸಂಗಣ್ಣಗೆ ಟಿಕೆಟ್ ತಪ್ಪಿದಾಗ ಪಕ್ಷದ ಎಲ್ಲರೂ ಸಮಾಧಾನ ಹೇಳಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರಬಾರದಿತ್ತು. ನನ್ನನ್ನು ರಾಜಕೀಯಕ್ಕೆ ಕರೆತಂದದ್ದು ಕರಡಿಯವರು. ನನ್ನ ಎಂಎಲ್‌ಸಿ ಮಾಡಿದ್ದು ಬಿಜೆಪಿ. ನಾನು ಪಕ್ಷ ನಿಷ್ಠಳು ಎಂದು ಹೇಮಲತಾ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾ ಮುತ್ತಾಳ, ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಪಾಟೀಲ್, ಮಾಧ್ಯಮ ಸಹಪ್ರಮುಖ ಪ್ರಸಾದ್ ಗಾಳಿ ಉಪಸ್ಥಿತರಿದ್ದರು.