ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕೆಆರ್‌ಎಸ್ ಅಣೆಕಟ್ಟಿನಿಂದ ವಿಸಿ ನಾಲಾ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಏಕೀಕರಣ ಸಂಘದ ರೈತ ಕಾರ್ಯಕರ್ತರು ಗುರುವಾರ ಮದ್ದೂರು, ಕೊಪ್ಪ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ನೇತೃತ್ವದಲ್ಲಿ ಬೆಸಗರಹಳ್ಳಿ ಅಡ್ಡರಸ್ತೆಯಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್ ಗಳೊಂದಿಗೆ ಪ್ರತಿಭಟನೆ ಇಳಿದ ಕಾರ್ಯಕರ್ತರು ಮದ್ದೂರು, ಕೊಪ್ಪ ರಸ್ತೆ ತಡೆದು ಧರಣಿ ನಡೆಸಿದರು. ಪ್ರತಿಭಟನೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಜನಪ್ರತಿನಿಧಿಗಳು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ವಿಸಿ ನಾಲ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಜಮೀನುಗಳಿಗೆ ಈ ಕೂಡಲೇ ನೀರು ಹರಿಸುವಂತೆ ಆಗ್ರಹಪಡಿಸಿದರು.
ಅಣೆಕಟ್ಟೆಯಿಂದ ಕಳೆದ ಜ.10ರಿಂದ ವಿಸಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿದಿದೆ. ಆದರೆ, ಕೆರಗೋಡು ನೀರಾವರಿ ಭಾಗದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ತಾಲೂಕಿನ ಗುಡಿದೊಡ್ಡಿ, ಮರಳಿಗ, ಪಣ್ಣೆದೊಡ್ಡಿ, ಮಹರ್ನಮಿದೊಡ್ಡಿ, ನಾಗನದೊಡ್ಡಿ, ಈರೇಗೌಡನ ದೊಡ್ಡಿ, ಆನೆದೊಡ್ಡಿ, ಮುದಿಗೆರೆ, ಹೊಸಕೆರೆ, ಕೊತ್ತನಹಳ್ಳಿ ಗ್ರಾಮಗಳ ಸುಮಾರು ನೂರಾರು ಎಕರೆ ಪ್ರದೇಶಗಳಿಗೆ ನೀರು ತಲುಪಿಲ್ಲ ಎಂದು ದೂರಿದರು.ಈಗಾಗಲೇ ನೀರಾವರಿ ಸಲಹಾ ಸಮಿತಿ ಆದೇಶದಂತೆ 18 ದಿನ ನೀರು ಹರಿದು ಈಗ ನಿಲ್ಲಿಸಿರುವುದರಿಂದ ನಾಲೆ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪದೇ ತೆಂಗು, ಕಬ್ಬು, ಬಾಳೆ, ರೇಷ್ಮೆ ಅನೇಕ ನಿಂತಿರುವ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ರೈತರಿಗೆ ಕೊಟ್ಟ ಭರವಸೆಯಂತೆ ನಾಲೆ ಕೊನೆ ಭಾಗಕ್ಕೆ ನೀರುಣಿಸಲು ಮತ್ತು ಉಪನಾಲೆಗಳನ್ನು ದುರಸ್ತಿ ಮಾಡಿಸಿ ನಾಳೆಯಿಂದ ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ನೀರಾವರಿ ಇಲಾಖೆಯವರು ನಾಲೆ ಏರಿ ಮೇಲೆ ಸಂಚರಿಸಿ ನೀರು ತಲುಪಿದ ನಂತರ ಖಾತರಿಯಾದ ಮೇಲೆ ನೀರು ನಿಲ್ಲಿಸಬೇಕು. ಬೇಸಿಗೆ ಬೆಳೆಗಳು ಒಣದಂತೆ ನೋಡಿಕೊಳ್ಳಬೇಕು. ಮೊದಲು ಕೊನೇ ಭಾಗದಿಂದ ನೀರು ಕೊಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ನಂಜುಂಡೇಗೌಡ ಮತ್ತು ಸಿಬ್ಬಂದಿ ಆಗಮಿಸಿ ಮತ್ತು ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಗೌಡ ಸಿಬ್ಬಂದಿ ರೈತ ಸಂಘದ ಮುಖಂಡರ ಜೊತೆ ಮಾತನಾಡಿ, ಕೂಡಲೇ ವಿಸಿ ವಿಭಾಗದ ಕೊನೇ ಭಾಗದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಅಣೆಕಟ್ಟೆಯಿಂದ ನೀರು ಕೊಡಿಸಲು ಮಾತನಾಡಿದ್ದು ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಿದರು. ನಂತರ ಪ್ರತಿಭಟನೆಕಾರರು ರಸ್ತೆ ತೆರವು ಮಾಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವೆಂಕಟೇಶ್, ಪ್ರಭುಲಿಂಗ, ನಂಜುಂಡಯ್ಯ, ಮರಿಲಿಂಗು, ಲಿಂಗರಾಜು, ಚೆನ್ನಪ್ಪ, ಯೋಗಾನಂದ, ಕೃಷ್ಣ, ನಾಗೇಶ್, ಲೋಕೇಶ್, ಉಮೇಶ್. ರಾಮಕೃಷ್ಣಯ್ಯ, ದಿನೇಶ್ ರಾಜು ಭಾಗವಹಿಸಿದ್ದರು.