ಮಳೆಯಿಂದ ಹಾನಿಗೊಂಡ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

| Published : Jul 30 2024, 12:31 AM IST

ಮಳೆಯಿಂದ ಹಾನಿಗೊಂಡ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಭರತ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಒತ್ತಾಯಿಸಿದ್ದಾರೆ.

ಗುಣಮಟ್ಟದ ವಿದ್ಯುತ್‌ ಕಂಬಗಳನ್ನು ಅಳವಡಿಸಬೇಕು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಭರತ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಸೋಮವಾರ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೆ. ಭರತ್‌, ನಿರೀಕ್ಷೆಗೂ ಮೀರಿ ಹೆಚ್ಚು ಪ್ರಮಾಣದಲ್ಲಿ ಮಳೆಯಿಂದ ಹಾನಿ ಉಂಟಾಗಿದೆ. ಸುಮಾರು 350ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ಈ ಪೈಕಿ 200 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ ಎಂದು ಹೇಳಿದರು.

ಮಲೆನಾಡು ಭಾಗವಾದ ಚಿಕ್ಕಮಗಳೂರು, ಶೃಂಗೇರಿ, ಕಳಸ, ಹೊರನಾಡು ಕಡೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಬಹುತೇಕ ಹಾನಿಗಳು ಸಂಭವಿಸಿದೆ. ಈ ಪೈಕಿ ಸುಮಾರು ಕುಗ್ರಾಮಗಳು ಒಳಗೊಂಡಿದೆ. ಪಟ್ಟಣ ಹಾಗೂ ಗ್ರಾಮದ ನಡುವೆ ಬೃಹತ್ ನದಿ, ಹಳ್ಳ ಹಾಗೂ ಕೆರೆಗಳು ಹರಿಯುವಿಕೆಯಿಂದ ಸಂಪರ್ಕ ಸಿಗದಂತಾಗಿದೆ ಎಂದರು.ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪುರಾತನ ಸೇತುವೆಗಳು ದುರಸ್ತಿಗೊಂಡ ಹಿನ್ನೆಲೆ ಮುಳುಗಡೆಯಾಗಿವೆ. ನೂರಾರು ಗ್ರಾಮ ಗಳು ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಸೇತುವೆ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿರುವುದು ವ್ಯಕ್ತ ವಾಗುತ್ತಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಸೇತುವೆ ಕಾಮಗಾರಿ ನಿರ್ವಹಿಸಲು ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಹೇಳಿದರು.ವಿದ್ಯುತ್ ಕಂಬಗಳನ್ನು ಪೂರೈಸುವ ಗುತ್ತಿಗೆದಾರರು ಹಾಗೂ ಕಂಪನಿಗಳು ಕಳಪೆ ಗುಣಮಟ್ಟದ ಕಂಬಗಳನ್ನು ವಿದ್ಯುತ್ ಇಲಾಖೆಗಳಿಗೆ ಪೂರೈಸುತ್ತಿವೆ. ಈ ಹಿಂದೆ ಮೇಲಾಧಿಕಾರಿಗಳು ಕೈಜೋಡಿದ ಶಂಕೆಯಿದೆ. ನಾಲ್ಕು ದಶಕಗಳ ಹಿಂದೆ ಹಾಕಿದ ಕಂಬಗಳೇ ಗಟ್ಟಿಮುಟ್ಟಿದೆ. ಆದರೆ, ಇತ್ತೀಚೆಗೆ ಹಾಕಿದ ಕಂಬಗಳ ಗುಣಮಟ್ಟ ಕಾಪಾಡಿಲ್ಲ ಎಂದು ಹೇಳಿದರು.ಕುಗ್ರಾಮಗಳಲ್ಲಿ ಯಾವುದೇ ಸೌಲಭ್ಯ ಇಲ್ಲದೇ ಮೆಸ್ಕಾಂ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದು ಇಂಥ ನೌಕರರನ್ನು ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರ ಗುರುತಿಸಿ ಗೌರವಿಸಬೇಕು ಎಂದು ಆಗ್ರಹಿಸಿದರು.ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ದೂಪತ್‌ ಖಾನ್, ಲಾಲ್‌ಬಾಗ್, ಬೈರೇಖಾನ್, ಮಂಚತ್ತೂರು, ಹುಂನೇನೈಲು, ನಂದಿಬಟ್ಟಲು, ಸೈದುಖಾನ್, ಬಸರೀಕಟ್ಟೆ, ಮೆಣಸಿನಹಾಡ್ಯ ಸೇರಿದಂತೆ ಅನೇಕ ಹಳ್ಳಿಗಳು ಮಳೆಗಾಲದಲ್ಲಿ ತೀವ್ರ ಸಮಸ್ಯೆಗಳನ್ನು ಹಲವು ವರ್ಷಗಳಿಂದ ಅನುಭವಿಸುತ್ತಿರುವ ಕಾರಣ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು. 29 ಕೆಸಿಕೆಎಂ 4ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಕೆ.ಭರತ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.